ಡೆಹ್ರಾಡೂನ್: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಭಿಖಿಯಾಸೈನ್ ಸಮೀಪ ಇಂದು (ಡಿ.30) ಬೆಳಿಗ್ಗೆ ಸಂಭವಿಸಿದೆ.
ಖಾಸಗಿ ಬಸ್ ದ್ವಾರಹತ್‌ನಿಂದ ರಾಮನಗರಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಅಪಘಾತದ ಸಂದರ್ಭದಲ್ಲಿ ಬಸ್ಸಿನಲ್ಲಿ ಸುಮಾರು 18 ರಿಂದ 19 ಪ್ರಯಾಣಿಕರಿದ್ದರು. ಈ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ತಂಡಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಭಿಖಿಯಾಸೈನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.



























