ಮಾರಿಷಸ್ ನಲ್ಲಿ ವಿದ್ಯಾರ್ಥಿಯಾಗಿರುವ ನಾಲ್ಕೂರು ಗ್ರಾಮದ ಹಲ್ಲುಜಿ, ಕಲ್ಲಾಜೆ ನಿವಾಸಿ ನಂದನ್ ಭಟ್ ಎಂಬ ಯುವಕ ಅಲ್ಲಿ ಜಲಪಾತ ವೀಕ್ಷಣೆಯ ವೇಳೆ ಬಿದ್ದು ದುರ್ಮರಣಕ್ಕೀಡಾಗಿದ್ದು, ಇವರ ಮೃತದೇಹ ವನ್ನು ಊರಿಗೆ ತರುವ ನಿಟ್ಟಿನಲ್ಲಿ ಇಬ್ಬರು ಸಂಸದರು ಮಧ್ಯ ಪ್ರವೇಶಿಸಿ ಪ್ರಯತ್ನ ನಡೆಸುತ್ತಿದ್ದಾರೆ.
ಕಲ್ಲಾಜೆಯ ಜಯಲಕ್ಷ್ಮಿ ಭಟ್ ಎಂಬವರ ಪುತ್ರರಾಗಿರುವ ನಂದನ್ ಎಸ್. ಭಟ್ ಅವರು ಮಾರಿಷಸ್ ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು ಅಲ್ಲಿ ಅಧ್ಯಯನ ನಡೆಸುತ್ತಿದ್ದರು. ನಿನ್ನೆ ಜಲಪಾತ ವೀಕ್ಷಣೆಗೆಂದು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವರಿಗೆ 26 ವರ್ಷ ವಯಸ್ಸಾಗಿತ್ತು. ಅವರ ಮೃತದೇಹವನ್ನು ಅಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ
ಈ ಘಟನೆಯ ಬಗ್ಗೆ ಮಿತ್ರರಿಂದ ಮಾಹಿತಿ ತಿಳಿದ ಕುಂದಾಪುರದ ವಸಂತ ಗಿಳಿಯಾರ್ ರವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದು ಎಲ್ಲೆಡೆ ವೈರಲ್ ಆಗಿತ್ತು. ಇದರಿಂದಾಗಿ ನಂದನ್ ಭಟ್ ಅವರ ಹೆಚ್ಚಿನ ಮಾಹಿತಿ ದೊರೆಯಿತು. ಮತ್ತೊಂದೆಡೆ ನಂದನ್ ಅವರ ಮಾವ, ಕಾರ್ಕಳದ ಸತ್ಯನಾರಾಯಣ ಭಟ್ ಅವರು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾಹಿತಿ ನೀಡಿ ಮನವಿ ಮಾಡಿದ್ದಾರೆ. ಈ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರೂ ಕೂಡ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ವಿದೇಶಾಂಗ ಮಂತ್ರಿಗಳ ಮತ್ತು ಎಂಬೆಸಿ ಮೂಲಕ ಇಬ್ಬರು ಸಂಸದರೂ ಕಾರ್ಯಪ್ರವೃತ್ತರಾಗಿದ್ದಾರೆ.
ನಂದನ್ ಭಟ್ ಮಾರಿಷಸ್ ನಲ್ಲಿ ಡಿಪ್ಲೊಮಾ ಇನ್ ಹಾಸ್ಪಿಟಾಲಿಟಿ ಆಂಡ್ ಟೂರಿಸಮ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಂದನ್ ಕಲ್ಲಾಜೆಯ ತನ್ನ ತಾಯಿಯ ಸಹೋದರ ಕೃಷ್ಣಕುಮಾರ್ ಅವರ ಮನೆಯಲ್ಲಿ ವಾಸವಿದ್ದರು. ಮೃತರು ತಾಯಿ, ಸಹೋದರಿ ನಮನ ಹಾಗೂ ಕುಟುಂಬಸ್ಥರನ್ನು ಬಂಧುಗಳನ್ನು ಅಗಲಿದ್ದಾರೆ.

























