ಕಾಬೂಲ್: ಅಫ್ಘಾನಿಸ್ತಾನದ ಪಾಕ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭಾರೀ ಪ್ರಮಾಣದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 800ಕ್ಕೆ ಏರಿಕೆಯಾಗಿದ್ದು, ಈ ಪರ್ವತ ತಪ್ಪಲಿನ ಪ್ರದೇಶದ ಗ್ರಾಮಗಳೇ ನಾಮಾವಶೇಷವಾಗಿರುವುದಾಗಿ ವರದಿ ತಿಳಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿರುವುದಾಗಿ ತಿಳಿದು ಬಂದಿದೆ.
ಭಾನುವಾರ ಮಧ್ಯರಾತ್ರಿ ಈ ಪ್ರಬಲ ಭೂಕಂಪ (6.3 ತೀವ್ರತೆ) ಸಂಭವಿಸಿದ್ದು, ಕಟ್ಟಡಗಳು, ಮನೆಗಳು ಧ್ವಂಸಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದ್ದು, 800ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 2,500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ನಂಗ್ರಾಹಾರ್ ಪ್ರಾಂತ್ಯದಲ್ಲಿ 12 ಮಂದಿ ಸಾವನ್ನಪ್ಪಿದ್ದು, 255 ಜನರು ಗಾಯಗೊಂಡಿದ್ದಾರೆ. ಭೂಕಂಪನದಲ್ಲಿ ನೂರಾರು ಮನೆಗಳು ನಾಮಾವಶೇಷವಾಗಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ ಖ್ಯಾನಿ ಎಎಫ್ ಪಿಗೆ ತಿಳಿಸಿದ್ದಾರೆ.
ಈ ಕುಗ್ರಾಮದ ಪ್ರದೇಶದಲ್ಲಿ ಜನರು ಮಣ್ಣು ಮತ್ತು ಇಟ್ಟಿಗೆಗಳಿಂದ ಕಟ್ಟಿದ ಮನೆಯಲ್ಲಿ ವಾಸವಾಗಿರುವುದೇ ಹೆಚ್ಚು. ಹೀಗಾಗಿ ಭೂಕಂಪದಿಂದ ಸಾವಿರಾರು ಮಂದಿ ಮನೆ ಕಳೆದುಕೊಂಡಂತಾಗಿದೆ. ಇಡೀ ಪ್ರದೇಶದಲ್ಲಿ ಭಯ, ಉದ್ವಿಗ್ನತೆ ವಾತಾವರಣ..ಮಕ್ಕಳು, ಮಹಿಳೆಯರ ಚೀರಾಟ. ಈ ಹಿಂದೆಂದೂ ಇಂತಹ ಅನುಭವ ನಮಗೆ ಆಗಿಲ್ಲ ಎಂದು ಇಜಾಝ್ ಉಲ್ ಹಖ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.