ಮೇಕೆಯನ್ನು ಬಲಿ ನೀಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದು ಮೇಕೆ ಮಾತ್ರ ಬದುಕುಳಿದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರದ ಚಾರ್ಗವಾನ್ ಪ್ರದೇಶದಲ್ಲಿ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸ್ಕಾರ್ಪಿಯೋ ವಾಹನವೊಂದು ಸೇತುವೆಯಿಂದ ಉರುಳಿದೆ. ಮಾತ್ರವಲ್ಲ ಸಮೀಪದ ಸೋಮಾವತಿ ನದಿಗೆ ಬಿದ್ದಿದೆ. ಈ ದುರಂತದಲ್ಲಿ ಸ್ಕಾರ್ಫಿಯೋ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಆದರೆ ವಿಚಿತ್ರ ಎಂದರೆ ಇವರ ಕಾರಿನಲ್ಲಿದ್ದ ಇವರು ದೇಗುಲದಲ್ಲಿ ಬಲಿ ನೀಡುವುದಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಮೇಕೆ ಮಾತ್ರ ಯಾವುದೇ ಗಾಯಗಳಿಲ್ಲದೇ ಪವಾಡ ಸದೃಶವಾಗಿ ಪಾರಾಗಿದೆ.
ಸದ್ಯ ಇದು ಅಲ್ಲಿನ ಸ್ಥಳೀಯರನ್ನು ಅಚ್ಚರಿಗೊಳ್ಳುವಂತೆ ಮಾಡಿದೆ.ದುರಂತದಲ್ಲಿ ಮೃತರಾದವರು ನರಸಿಂಗ್ ಪುರ ಜಿಲ್ಲೆಯ ದುಲ್ಲಾ ದೇವ್ ಮಹಾರಾಜ್ ದೇವಸ್ಥಾನದಲ್ಲಿ ಸಾಂಕೇತಿಕ ಮೇಕೆ ಬಲಿ ನೀಡಿ ವಾಪಸಾಗುತ್ತಿದ್ದರು. ಅಂದರೆ ಸಂಪೂರ್ಣವಾಗಿ ಮೇಕೆಯ ಬಲಿ ನೀಡುವ ಬದಲು ಅದರ ಕಿವಿಯನ್ನು ಕತ್ತರಿಸಿ ದೇವರಿಗೆ ಸಾಂಕೇತಿಕ ಬಲಿ ನೀಡಿದ್ದರು. ಇದಾದ ನಂತರ ತಮ್ಮ ಸ್ಕಾರ್ಫಿಯೋ ಗಾಡಿಯಲ್ಲಿ ಗೋಟೆಗಾಂವ್ ನಿಂದ ವಾಪಸ್ ಜಬಲ್ ಪುರಕ್ಕೆ ಮರಳುತ್ತಿದ್ದಾಗ ಚಾರ್ಗವಾನ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ಕೂಡಲೇ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.ಬಳಿಕ ಸ್ಥಳಕ್ಕೆ ಬಂದ ರಕ್ಷಣಾ ತಂಡಗಳು ಭೀಕರ ಅಪಘಾತದಿಂದ ನಜ್ಜುಗುಜ್ಜಾದ ವಾಹನದ ಮಧ್ಯೆಯಿಂದ ಮೃತರನ್ನು, ಗಾಯಾಳುಗಳನ್ನು ಕಾರಿನಿಂದ ಹೊರ ತೆಗೆದಿದ್ದಾರೆ.ಪೊಲೀಸ್ ಅಧಿಕಾರಿ ಅಭಿಷೇಕ್ ಪ್ಯಾಸಿ ಮೃತರನ್ನುಸ್ಥಳದಲ್ಲೇ ಮೃತರಾದವರನ್ನು ಕಿಶನ್ ಪಟೇಲ್, ಸಾಗರ್ ಪಟೇಲ್, ರಾಜೇಂದ್ರ ಪಟೇಲ್ ಮತ್ತು ಮಹೇಂದ್ರ ಪಟೇಲ್ ಎಂದು ದೃಢಪಡಿಸಿದರು. ಹಾಗೆಯೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮನೋಜ್ ಪಟೇಲ್ (34) ಮತ್ತು ಜಿತೇಂದ್ರ ಪಟೇಲ್ (35) ಅವರು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇವರೆಲ್ಲರೂ ಭೇದಘಾಟ್ ಚೌಕಿಟಲ್ ನಿವಾಸಿಗಳಾಗಿದ್ದಾರೆ.ವಾಹನದಲ್ಲಿದ್ದವರು ಮದ್ಯ ಸೇವಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ ಮತ್ತು ವಾಹನದಿಂದ ಮದ್ಯದ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಕಾರಿನ ಒಳಗೆ ಕಂಡುಬಂದ ಆಹಾರ ಪದಾರ್ಥಗಳು ಇವರು ಧಾರ್ಮಿಕ ವಿಧಿವಿಧಾನದ ನಂತರ ಔತಣಕೂಟವನ್ನು ಏರ್ಪಡಿಸಿದ್ದಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಅಧಿಕಾರಿ ಪ್ಯಾಸಿ ಮಾಹಿತಿ ನೀಡಿದ್ದಾರೆ.