ಉಕ್ರೇನ್‌ನಲ್ಲಿ ಭಾರತೀಯ ಔಷಧ ಕಂಪನಿಯ ಗೋದಾಮಿನ ಮೇಲೆ ರಷ್ಯಾದ ಕ್ಷಿಪಣಿ ದಾಳಿ ಮಾಡಿದೆ ಎಂದು ಉಕ್ರೇನ್ ಶನಿವಾರ (ಏ.12) ತಿಳಿಸಿದೆ. ರಷ್ಯಾ ಉದ್ದೇಶಪೂರ್ವಕವಾಗಿ ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಭಾರತದಲ್ಲಿನ ಉಕ್ರೇನ್ ರಾಯಭಾರ ಕಚೇರಿ ಆರೋಪಿಸಿದೆ.
“ಇಂದು, ರಷ್ಯಾದ ಕ್ಷಿಪಣಿಯು ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ದಾಳಿ ಮಾಡಿದೆ. ಭಾರತದ ಜೊತೆ ‘ವಿಶೇಷ ಸ್ನೇಹ’ ಎಂದು ಹೇಳಿಕೊಳ್ಳುತ್ತಾ, ಮಾಸ್ಕೋ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸುತ್ತಿದೆ” ಎಂದು ಉಕ್ರೇನ್‌ನ ರಾಯಭಾರ ಕಚೇರಿ ತಿಳಿಸಿದೆ.
ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಒಡೆತನದ ಕುಸುಮ್, ಉಕ್ರೇನ್‌ನ ಅತಿದೊಡ್ಡ ಔಷಧ ಸಂಸ್ಥೆಗಳಲ್ಲಿ ಒಂದಾಗಿದೆ. ಕಂಪನಿಯ ಉತ್ಪನ್ನಗಳು ಉಕ್ರೇನ್‌ನಾದ್ಯಂತ ನಿರ್ಣಾಯಕವಾಗಿವೆ ವರದಿಯಾಗಿದೆ. ಕ್ಷಿಪಣಿ ದಾಳಿ ಆಗಿಲ್ಲ, ಡೋನ್ ಗೋದಾಮಿನ ಮೇಲೆ ನೇರ ದಾಳಿ ಮಾಡಿದೆ ಎಂದು ಮೂಲಗಳನ್ನು ಉದ್ದೇಶಿಸಿ ಎನ್ ಡಿಟಿವಿ ವರದಿ ಮಾಡಿದೆ.
ಉಕ್ರೇನ್ ರಾಯಭಾರಿ ಕಚೇರಿಯ ಹೇಳಿಕೆ ಮೊದಲು ಉಕ್ರೇನ್ ನಲ್ಲಿರುವ ಬ್ರಿಟನ್ ರಾಯಭಾರಿ ಮಾರ್ಟಿನ್ ಹ್ಯಾರಿಸ್ ಅವರು, ಕೀವ್ ನಲ್ಲಿರುವ ಪ್ರಮುಖ ಔಷಧ ಗೋದಾಮನ್ನು ರಷ್ಯಾ ಉಡಾಯಿಸಿದೆ ಎಂದು ಹೇಳಿದ್ದರು.ಅವರು ಕೂಡಾ ಇದು ಡ್ರೋನ್ ದಾಳಿ ಎಂದು ಹೇಳಿದ್ದರು.
“ಇಂದು ಬೆಳಿಗ್ಗೆ ರಷ್ಯಾದ ಡೋನ್‌ಗಳು ಕೀವ್‌ನಲ್ಲಿರುವ ಪ್ರಮುಖ ಔಷಧ ಗೋದಾಮನ್ನು ಸಂಪೂರ್ಣವಾಗಿ ನಾಶಪಡಿಸಿದವು, ವೃದ್ಧರು ಮತ್ತು ಮಕ್ಕಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಸುಟ್ಟುಹಾಕಿದವು.
ಉಕ್ರೇನಿಯನ್ ನಾಗರಿಕರ ವಿರುದ್ಧ ರಷ್ಯಾದ ಭಯೋತ್ಪಾದನಾ ಅಭಿಯಾನ ಮುಂದುವರೆದಿದೆ” ಎಂದು ಮಾರ್ಟಿನ್ ಪೋಸ್ಟ್ ಮಾಡಿದ್ದಾರೆ.




































