ಮಂಗಳೂರು : ಜಾತ್ರೆ, ಕಂಬಳೋತ್ಸವ, ಬಸ್, ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಿದ್ದ ಬೈಕ್, ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಶಿವಮೊಗ್ಗ ಮೂಲದ, ಮೂಡುಬಿದ್ರೆಯಲ್ಲಿ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಮುಖ ಆರೋಪಿ ಮಣಿಕಂಠ ಗೌಡ ಕೆ. (24) ಸೇರಿ ನಾಲ್ವರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠ ಗೌಡ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಳವು ಮತ್ತು ಮಾರಾಟ ಜಾಲ ನಡೆಸುತ್ತಿದ್ದನು. ಮೂಡುಬಿದ್ರೆಯಲ್ಲಿ ಕಳವು ಮಾಡಿ ಬಚ್ಚಿಡಲಾಗಿದ್ದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಣಿಕಂಠ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಜಾತ್ರೆ, ಕಂಬಳೋತ್ಸವ, ಬಸ್, ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್ ಗಳನ್ನು ಕದಿಯುತ್ತಿದ್ದ. ಸ್ವತಃ ಮೆಕ್ಯಾನಿಕ್ ಆಗಿದ್ದರಿಂದ ವಾಹನಗಳ ಇಗ್ನಿಷನ್ ಸಾಕೆಟ್ ಪ್ಲಗ್ಗನ್ನು ಚಾಕಚಕ್ಯತೆ ಹೊಂದಿದ್ದ. ಹೀರೋ ಹೋಂಡಾ ಸ್ಪೆಂಡರ್ ಬೈಕ್‌ಗಳಿಗೆ ರೀಸೇಲ್ ವ್ಯಾಲ್ಯೂ ಹೆಚ್ಚಿರುವುದರಿಂದ ಅದನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ. ಈತನಿಂದ ಕಾರ್ಕಳದ ಸತೀಶ್ ಬಂಗೇರ, ಮೂಡಬಿದ್ರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರು ಬೈಕ್ ಗಳನ್ನು ಖರೀದಿಸಿ ರೀ ಸೇಲ್ ಮಾಡುತ್ತಿದ್ದರು ಎನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದು ಅವರನ್ನೂ ಬಂಧಿಸಿದ್ದಾರೆ.
ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅವರ ಮೇಲೆ ಕೇಸು ದಾಖಲಿಸಲಾಗಿದೆ. ಮಂಗಳೂರು ಬಂದರು, ಪಾಂಡೇಶ್ವರ, ಬಜ್ಜೆ, ಮುಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯ 15 ಪ್ರಕರಣ ಹಾಗೂ ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಐದು ಪ್ರಕರಣ ಸೇರಿ 20 ಕೇಸುಗಳನ್ನು ಪತ್ತೆ ಮಾಡಲಾಗಿದೆ.