ಬೆಂಗಳೂರು: ಝೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿ ಗ್ರಾಮದ ಅಂಧ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ತಮ್ಮ ಹಾಡುಗಳಿಂದಲೇ ಖ್ಯಾತಿ ಗಳಿಸಿದ್ದರು. ಇದೀಗ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಸೋಮವಾರ ತಡರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಅಂಧರಾಗಿದ್ದ ಮಂಜಮ್ಮ ಝೀ ಕನ್ನಡ ವಾಹಿನಿಯ ಸರಿಗಮಪ ಸಿಂಗಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪಾರ ಜನಮನ್ನಣೆ ಗಳಿಸಿದ್ದರು.
ಆರಂಭದಲ್ಲಿಯೇ ಸುಸಜ್ಜಿತ ಮನೆಯಿಲ್ಲದೆ ಕಷ್ಟಪಡುತ್ತಿದ್ದ ಈ ಅಂಧ ಗಾಯಕಿಯರಿಗೆ ಹಿರಿಯ ನಟ ಜಗ್ಗೇಶ್ ಮನೆ ಕಟ್ಟಿಸಿಕೊಟ್ಟಿದ್ದರು. ಮಧುಗಿರಿ ತಾಲ್ಲೂಕಿನ ದೇವಸ್ಥಾನದ ಬಳಿ ಹಾಡುತ್ತಿದ್ದ ಈ ಸಹೋದರಿಯ ಕಷ್ಟ ಕಂಡು ನಟ ಜಗ್ಗೇಶ್ ಕೂಡ ತಮ್ಮ ಸಹಾಯಹಸ್ತ ಚಾಚುವ ಕುರಿತು ಹೇಳಿಕೊಂಡಿದ್ದರು.
ಸರಿಗಮಪ ಕಾರ್ಯಕ್ರಮದಲ್ಲಿ ಈ ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ! ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿ ಸಂಘ ಎಂದು ಬರೆದುಕೊಂಡಿದ್ದರು ಜಗ್ಗೇಶ್.
ಜಗ್ಗೇಶ್-ಪರಿಮಳ ನಿಲಯ ಎಂದು ಹೆಸರಿಡಲಾಗಿತ್ತು. ಶ್ರೀರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿಗಳ ಸಾನ್ನಿಧ್ಯದಲ್ಲಿ ಮಾರ್ಚ್ 12ರಂದು ಗೃಹ ಪ್ರವೇಶ ನಡೆದಿತ್ತು ಎಂದು ವರದಿಯಾಗಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅಂಧ ಸಹೋದರಿಯರಿಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದಿದ್ದರು. ಕುಟುಂಬದ ತಿಂಗಳ ರೇಷನ್ ವ್ಯವಸ್ಥೆ ನನ್ನದು ಎಂದು ಘೋಷಿಸಿದ್ದರು. ಡಾ.ಹಂಸಲೇಖ ಅವರು ಅಂಧ ಗಾಯಕಿಯರಾದ ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ನೆರವಾಗಲು ಒಂದು ಮೊಬೈಲ್ ಆರ್ಕೆಸ್ಟ್ರಾ ಆಯೋಜಿಸಲು ಸಜ್ಜಾಗಿದ್ದರು.