ಕಾಪು: ಬೈಕ್ ಗೆ ಟ್ರಕ್ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟು, ಟ್ರಕ್ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಜ.10ರ ಶುಕ್ರವಾರ ಮದ್ಯರಾತ್ರಿ ರಾ.ಹೆ. 66 ರ ಉದ್ಯಾವರ ಕೊರಂಗ್ರಪಾಡಿ ಬಳಿ ನಡೆದಿದೆ.
ಕೊರಂಗ್ರಪಾಡಿಯಿಂದ ಉದ್ಯಾವರ ಮೂಲಕವಾಗಿ ಪಣಿಯೂರಿಗೆ ಮರಳುತ್ತಿದ್ದ ಬೈಕ್ ಸವಾರ ಪಣಿಯೂರು ನಿವಾಸಿ ಅವಿನಾಶ್ ಆಚಾರ್ಯ (19) ಮೃತ ಯುವಕ.
ಉಡುಪಿಯಲ್ಲಿ ಪ್ಯಾರಾ ಮೆಡಿಕಲ್ ಕಲಿಯುತ್ತಿದ್ದ ಯುವಕ ರಾತ್ರಿ ಪರಿಚಯಸ್ಥರ ಮನೆಯ ಕಾರ್ಯಕ್ರಮಕ್ಕೆ ತೆರಳಿ, ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಟ್ರಕ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.