ಮಂಗಳೂರು: ನಾಪತ್ತೆಯಾಗಿದ್ದ ಯುವಕನೋರ್ವನು ನಗರದ ಮರವೂರು ಸೇತುವೆ ಬಳಿಯ ಗುರುಪುರ ನದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದು, ಮೃತ ಯುವಕನನ್ನು ಮೂಡುಶೆಡ್ಡೆ ನಿವಾಸಿ ಸೂರ್ಯ (24) ಎಂದು ಗುರುತಿಸಲಾಗಿದೆ.
ಈತ ಆರ್‌ಪಿಸಿ ಎಂಬ ಆನ್‌ಲೈನ್ ನಕಲಿ ಹೂಡಿಕೆ ಕಂಪೆನಿಯಲ್ಲಿ ಹೂಡಿಕೆ ಮಾಡಿ ಹಣ ಬರದೇ ಇದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತದೆ.
ಡಿಸೆಂಬರ್ 25ರಂದು ಸೂರ್ಯ ನಾಪತ್ತೆಯಾಗಿದ್ದ. ಆ ಬಳಿಕ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಆತ ಮರವೂರು ಸೇತುವೆ ಬಳಿಯ ಗುರುಪುರ ನದಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದಾನೆ.
“RPC” ಎಂಬ ಆ್ಯಪ್‌ನಲ್ಲಿ ಕೇವಲ ವೀಡಿಯೋಗಳನ್ನು ನೋಡುವ ಮೂಲಕ ಹಣ ಸಂಪಾದಿಸಬಹುದು ಎಂಬ ವಿಚಾರ ಕೆಲ ತಿಂಗಳಿಂದ ಇತ್ತೀಚೆಗೆ ದ.ಕ.ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿತ್ತು. ಮೂಲಗಳ ಪ್ರಕಾರ ಸೂರ್ಯನೂ ಸುಮಾರು 70 ಸಾವಿರಕ್ಕೂ ಅಧಿಕ ಹಣವನ್ನು ಸಾಲ ಪಡೆದು RPC ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದ. ಸದ್ಯ ಈ ಕಂಪೆನಿ ಫ್ರಾಡ್ ಎಂದು ತಿಳಿದಾಗ ಸಾಲದ ಸುಳಿಗೆ ಬಿದ್ದಿದೇನೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.