ಪುತ್ತೂರು: ಕಬಕ ಗ್ರಾಮದ ನೆಹರುನಗರದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೆರ್ನಾಜೆಯ ಆಶ್ಲೇಷ ಭಟ್, ರಿಕ್ಷಾ ಚಾಲಕರಾದ ನಾರಾಯಣ್ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಮತ್ತು ಸಹಾಯಕ ಸುಳ್ಯದ ಆಶ್ರಫ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಲಾರಿಯಿಂದ ಕಳವಾದ ಸುಮಾರು 21.44 ಲಕ್ಷ ರೂ. ಮೌಲ್ಯದ 80 ಗೋಣಿ ಕಾಫಿ ಬೀಜ ಮತ್ತು ಕೃತ್ಯಕ್ಕೆ ಬಳಸಿದ ಎರಡು ಆಟೋ ರಿಕ್ಷಾ, ಒಂದು ಗೂಡ್ಸ್ ಟೆಂಪೋಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ:
ನೆಹರುನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರುಹಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸಿಯಿಂದ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಟ್ರಾನ್ಸ್ ಪೋರ್ಟ್ ಮಾಡಲು ಬುಕ್ಕಿಂಗ್ ಪಡೆದುಕೊಂಡು ತನ್ನ ಲಾರಿಯಲ್ಲಿ ಪಿರಿಯಾಪಟ್ಟಣದ ಪೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪನೆಯಿಂದ ಡಿ.3ರಂದು 320 ಗೋಣಿ ಕಾಫಿ ಬೀಜಗಳನ್ನು ಲೋಡ್ ಮಾಡಿಕೊಂಡು ಮಂಗಳೂರು ಬಂದರಿಗೆ ಹೊರಟು ಬಂದಿದ್ದವರು ದಾರಿ ಮಧ್ಯೆ ರಾತ್ರಿ ನೆಹರುನಗರ ಬಳಿ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು.
ಡಿ.4ರಂದು ಬೆಳಗ್ಗೆ ಬಂದು ಮಂಗಳೂರಿಗೆ ಹೋಗಿದ್ದರು. ಮಂಗಳೂರು ಬಂದರಿನಲ್ಲಿ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಿದಾಗ ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡುಬಂದಿದ್ದು ಬಳಿಕ ಕಂಪೆನಿಯ ಮೇಲ್ವಿಚಾರಕರು ಲಾರಿಯ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ಲಾರಿಯಲ್ಲಿದ್ದ 320 ಗೋಣಿ ಕಾಫಿ ಬೀಜಗಳ ಪೈಕಿ ರೂ. 21.44 ಲಕ್ಷ ಮೌಲ್ಯದ 80 ಗೋಣಿ ಕಾಫಿ ಬೀಜ ಗಳು ಕಳವಾಗಿರುವುದು ಕಂಡುಬಂದಿತ್ತು.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡರು. ಸಿಸಿ ಕ್ಯಾಮರಾ ಆಧಾರಿಸಿ ಕಳ್ಳರ ಜಾಡು ಹಿಡಿದ ಪೊಲೀಸರು, ಕಳವಾಗಿದ್ದ ಕಾಫಿ ಬೀಜಗಳನ್ನು ಗೋಣಿಕೊಪ್ಪದಲ್ಲಿ ನಾಸೀರ್ ಎಂಬವರಿಗೆ ಸೇರಿದ ಗೋದಾಮಿನಲ್ಲಿ ಪತ್ತೆ ಮಾಡಿದ್ದಾರೆ. ಆಶ್ಲೇಷ್ ಭಟ್ ಪ್ರಮುಖ ಆರೋಪಿಯಾಗಿದ್ದು, ಆತ ಆಟೋ ರಿಕ್ಷಾಗಳನ್ನು ಬಾಡಿಗೆಗೆ ಗೊತ್ತುಪಡಿಸಿ ಕಾಫಿ ಬೀಜಗಳನ್ನು ಕಳವು ಮಾಡಿದ್ದು ನಾರಾಯಣ್ ಶೆಟ್ಟಿಗಾರ್ ಮತ್ತು ಮಿಥುನ್ ಕುಮಾರ್ ಆಟೋ ಚಾಲಕರಾಗಿ ಬಂದಿದ್ದರು. ಅವರ ಜೊತೆಗೆ ಪಿಕಪ್ ಜೀಪಿನಲ್ಲಿ ಬದಲಿ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ ಸುಳ್ಯದ ಆಶ್ರಫ್ ಸಹಾಯಕನಾಗಿ ಬಂದಿದ್ದ ವಿಚಾರ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.



























