ಉತ್ತರ ಪ್ರದೇಶದ ಅಲಿಗಢದ ಭಗವಾನ್‌ಪುರ ಮತ್ತು ಬುಲಖಿಗಢದ 5 ದೇವಾಲಯದ ಗೋಡೆಗಳ ಮೇಲೆ ‘ಐ ಲವ್ ಮುಹಮದ್’ ಬರಹ ಕಂಡುಬಂದ ಹಿನ್ನೆಲೆಯಲ್ಲಿ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿದ್ದು ಅಪಾರ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ದುಷ್ಕರ್ಮಿಗಳ ಪತ್ತೆಗಾಗಿ ವಿಧಿ ವಿಜ್ಞಾನ ತಂಡದ ಸಹಾಯವನ್ನು ಕೋರಲಾಗಿದ್ದು, ಅವರು ಸಿಸಿಟೀವಿ ದೃಶ್ಯಾವಳಿಗಳ ಪರಿಶೀಲಿಸುತ್ತಿದ್ದಾರೆ. 8 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು ಭೂ ವಿವಾದದ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲಿಗಢ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಎರಡೂ ಗ್ರಾಮಗಳಲ್ಲಿನ ಧಾರ್ಮಿಕ ಸ್ಥಳಗಳ ಪರಿಶೀಲಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಧಾರ್ಮಿಕ ಘೋಷಣೆಗಳ ಅಳಿಸಿ ಹಾಕಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಲ್ಲ ಅಂಶಗಳ ಸಮಗ್ರ ತನಿಖೆ: ಎಸ್‌ಪಿ
ಬುಲಕ್‌ಗರ್ಹಿ ಮತ್ತು ಭಗವಾನ್‌ಪುರ ಗ್ರಾಮಗಳಲ್ಲಿರುವ ಎಲ್ಲಾ ಧಾರ್ಮಿಕ ತಾಣಗಳ ಪರಿಶೀಲನೆ ಬಳಿಕ ಅಲಿಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಮಾತನಾಡಿ, ನಾಲ್ಕು ಧಾರ್ಮಿಕ ಸ್ಥಳಗಳಲ್ಲಿ ಬರೆಯಲಾದ ಧಾರ್ಮಿಕ ಘೋಷಣೆಗಳ ಅಳಿಸಿ ಹಾಕಲಾಗಿದೆ. ಗ್ರಾಮಸ್ಥರೊಂದಿಗೆ ಚರ್ಚೆಯನ್ನೂ ನಡೆಸಲಾಗಿದೆ. ಗ್ರಾಮದಲ್ಲಿ ಈ ಹಿಂದೆ ನಡೆದಿದ್ದ ವಿವಾದವೂ ಗಮನಕ್ಕೆ ಬಂದಿದೆ. ಎಲ್ಲಾ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಸದ್ಯ ಸ್ಥಳದಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದ್ದಾರೆ.























