ಕೋಲ್ಡ್ ರಿಲೀಫ್ ಕೆಮ್ಮಿನ ಔಷಧ ಸೇವಿಸಿ 22 ಮಕ್ಕಳ ಸಾವಿಗೆ ಕಾರಣವಾದ ಕಂಪನಿ ಮಾಲೀಕನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶನ್ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಈ ಮೊದಲೇ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಮಧ್ಯಪ್ರದೇಶ ಪೊಲೀಸರು ಬುಧವಾರ(ಅ.08) ತಡರಾತ್ರಿ ಚೆನ್ನೈನಲ್ಲಿ ಕಂಪನಿ ಮಾಲೀಕ ರಂಗನಾಥನ್ ಗೋವಿಂದನ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರಿದಿರುವುದಾಗಿ ವರದಿ ವಿವರಿಸಿದೆ.
ಮಾರಕ ಕೋಲ್ಮೀಫ್ ಕೆಮ್ಮಿನ ಔಷಧ ಸೇವಿಸಿ ಕನಿಷ್ಠ 20 ಮಕ್ಕಳು ಸಾವಿಗೀಡಾದ ನಂತರ ಮಧ್ಯಪ್ರದೇಶ ಪೊಲೀಸರು ಕಂಪನಿ ಮಾಲೀಕನ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದರು. ರಾಜಸ್ಥಾನದಲ್ಲೂ ಸಿರಫ್ ಸೇವಿಸಿ ಇಬ್ಬರು ಮಕ್ಕಳು ಕೊನೆಯುಸಿರೆಳೆದಿದ್ದರು.
ರಂಗನಾಥನ್ ವಿರುದ್ಧ ಕಲಬೆರಕೆ, ಕೊಲೆ ಸಮಾನಾಂತರ ಅಪರಾಧ ಹಾಗೂ ಮಕ್ಕಳ ಸುರಕ್ಷತೆಯ ಬೇಜವಾಬ್ದಾರಿತನ ಸೇರಿದಂತೆ ಹಲವು ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಮ್ಮಿನ ಔಷಧ ಸೇವಿಸಿ ಮಕ್ಕಳ ಸಾವು ಸಂಭವಿಸಿದ ಘಟನೆ ನಂತರ ಕಂಪನಿ ಮಾಲೀಕ ರಂಗನಾಥನ್ ಗೋವಿಂದನ್ ತಲೆಮರೆಸಿಕೊಂಡಿದ್ದ. ಅಲ್ಲದೇ ಈತನ ಬಗ್ಗೆ ಸುಳಿವು ನೀಡಿದವರಿಗೆ 20,000 ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದ್ದು, ನಿನ್ನೆ ಮಧ್ಯರಾತ್ರಿ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.