ಬಡವರಿಗೆಂದು ಸರಕಾರ ಕೊಡಲು ನಿಗದಿಮಾಡಿದ ಅನ್ನಭಾಗ್ಯದ ಅಕ್ಕಿಯನ್ನು ಫಾರಿನ್‌ಗೆ ಕಳುಹಿಸುತ್ತಿದ್ದ ಜಾಲವೊಂದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿರುವ ಘಟನೆ ನಡೆದಿದೆ. ಒಟ್ಟು 6000 ಟನ್ ಅಕ್ಕಿ ಜಪ್ತಿ ಮಾಡಲಾಗಿದೆ.
ಬಿಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು ಪಾಲಿಶ್ ಮಾಡಿ ದುಬೈ ಫ್ರಾನ್ಸ್ ದೇಶಗಳಿಗೆ ಈ ಅಕ್ಕಿಯನ್ನು ರಫ್ತು ಮಾಡಲಾಗುತ್ತಿತ್ತು. ಅಧಿಕಾರಿಗಳು ದಿಟ್ಟ ಕಾರ್ಯಾಚರಣೆ ಮಾಡಿ ಸರಿ ಸುಮಾರು 6000 ಟನ್ ಅಕ್ಕಿ ಸೀಜ್ ಮಾಡಿದ್ದಾರೆ.
ಜಿಲ್ಲೆಯ ಹಲವು ಕಡೆಯಿಂದ ಅಕ್ಕಿಯ ಸಂಗ್ರಹ ಮಾಡಲಾಗುತ್ತಿತ್ತು. ನಂತರ ಅದನ್ನು ಪಾಲಿಶ್ ಮಾಡಿ ಅದಕ್ಕೊಂದು ಬ್ರಾಂಡ್ ಹೆಸರನ್ನು ನೀಡಿ, ನಂತರ ದುಬೈ, ಫ್ರಾನ್ಸ್ ಇನ್ನಿತರ ರಾಷ್ಟ್ರಗಳಿಗೆ ಕಳುಹಿಸುವ ಕೆಲಸ ಮಾಡಲಾಗುತ್ತಿತ್ತು.
ಈ ಅಕ್ಕಿಗೆ ಹೊರದೇಶದಲ್ಲಿ ಭಾರೀ ದರ ಇದ್ದು, ಒಳ್ಳೆ ಗುಣಮಟ್ಟದ ಅಕ್ಕಿ ಎಂದು ಮಾರಾಟ ಮಾಡಿ ಹಣ ಮಾಡುವ ಜಾಲ ಕೆಲಸ ನಿರ್ವಹಿಸುತ್ತಿತ್ತು.
ಆಹಾರ ಇಲಾಖೆಯ ಅಧಿಕಾರಿಗಳು ಶುಕ್ರವಾರ ರಾತ್ರಿ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್ ಮೇಲೆ ದಾಳಿ ಮಾಡಿ ಅಕ್ಕಿ ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.