ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ದಿನಾಂಕ 29-08-2025 ಮೇರೆಗೆ ದೇರಳಕಟ್ಟೆ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ 53.29 ಗ್ರಾಂ, 2.33 ಗಾಂಜಾಹಾಗೂ 0.45 ಗ್ರಾಂ MDMA ಪಿಲ್ಸ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ಸುಮಾರು ರೂ. 10.85 ಲಕ್ಷ ಆಗಿದ್ದು, ಡಿಜಿಟಲ್ ತೂಕ ಮಾಪನ ಯಂತ್ರ, ಮೊಬೈಲ್ ಫೋನ್ ಸೇರಿದಂತೆ ಒಟ್ಟು ರೂ. 11.05 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಮೋಹಮ್ಮದ್ ಅರ್ಶದ್ ಖಾನ್ (29), ಮೂಲತಃ ಕೇರಳದ ಕೊಚ್ಚಿ, ಪ್ರಸ್ತುತ ದೇರಳಕಟ್ಟೆ ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿ ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಪೊಲೀಸರು ಮುಂದುವರೆಸಿದ್ದಾರೆ.
ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.