ಲಿವರ್ ಕಸಿ ಶಸ್ತ್ರ ಚಿಕಿತ್ಸೆಯ ಬಳಿಕ ಪತಿ – ಪತ್ನಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಪುಣೆಯಲ್ಲಿ ನಡೆದಿದೆ.
ಪತಿ ಬಾಪು ಕೊಮ್ಮರ್ (49) ಅವರಿಗೆ ವೈದ್ಯರು ತುರ್ತು ಲಿವರ್ ಕಸಿ ಮಾಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಕಾಮಿನಿ ತನ್ನ ಯಕೃತ್ತಿನ ಒಂದು ಭಾಗವನ್ನು ಪತಿಗೆ ದಾನ ಮಾಡಲು ಮುಂದಾಗಿದ್ದರು.
ಆಗಸ್ಟ್ 15 ರಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕಸಿ ಶಸ್ತ್ರ ಚಿಕಿತ್ಸೆಯ ಬಳಿಕ ಬಾಪು ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರು ಏನೇ ಮಾಡಿದರೂ ಬಾಪು ಅವರನ್ನು ಉಳಿಸಲು ಆಗಿಲ್ಲ. ಆಗಸ್ಟ್ 17 ರಂದು ಬಾಪು ಕೊನೆಯುಸಿರೆಳೆದಿದ್ದಾರೆ.
ದಂಪತಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಗೆ ದಾಖಲಾಗಿ, ಅಲ್ಲಿ ಕೇಳಿದ್ದ ಎಲ್ಲಾ ವಿವರಗಳನ್ನು ನೀಡಿದ ಬಳಿಕ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿತ್ತು. ಆದರೆ ಕಸಿ ಶಸ್ತ್ರ ಚಿಕಿತ್ಸೆಯ ಬಳಿಕ ಬಾಪು ನಿಧನ ಹೊಂದಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಮಿನಿ ಅವರಿಗೆ ಸೋಂಕು ತಗುಲಿದ್ದು, ಆಗಸ್ಟ್ 21 ರಂದು ಅವರು ಕೂಡ ಕೊನೆಯುಸಿರೆಳೆದಿದ್ದಾರೆ
ಕುಟುಂಬದಲ್ಲಿ ಇಬ್ಬರನ್ನು ಕಳೆದುಕೊಂಡ ಬಳಿಕ ಕುಟುಂಬಸ್ಥರು, ವೈದ್ಯರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
“ನನ್ನ ಸಹೋದರಿ ಆರೋಗ್ಯವಾಗಿದ್ದಳು. ಅವಳು ದಾನಿಯಾಗಿದ್ದಳು. ಅವಳಿಗೆ ಈ ರೀತಿ ಆಗಿದೆ ಎಂದರೆ ಅದನ್ನು ನಂಬುವುದು ಕಷ್ಟವೆಂದು” ಕಾಮಿನಿ ಅವರ ಸಹೋದರ ಬಾಲರಾಜ್ ವಾಡೇಕರ್ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ 12 ಲಕ್ಷ ರೂಪಾಯಿ ಸಾಲ ಮಾಡಿಸಿಕೊಂಡಿದ್ದಾಗಿ ವಾಡೇಕರ್ ಹೇಳಿದ್ದಾರೆ.
ಬಾಪು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾಮಿನಿ ಗೃಹಿಣಿಯಾಗಿದ್ದರು. ದಂಪತಿಗೆ 20 ವರ್ಷದ ಮಗ ಮತ್ತು 7ನೇ ತರಗತಿ ಓದುತ್ತಿರುವ ಮಗಳಿದ್ದಾರೆ ಎಂದು ವರದಿ ತಿಳಿಸಿದೆ.
ಆಸ್ಪತ್ರೆಗೆ ನೊಟೀಸ್:
ಘಟನೆ ಬಳಿಕ ಆಸ್ಪತ್ರೆ ವಿರುದ್ಧ ಆಕ್ರೋಶ ಹೊರಬಿದ್ದಿದ್ದು, ಈ ಕುರಿತು “ಎಲ್ಲಾ ವೈದ್ಯಕೀಯ ವೈದ್ಯಕೀಯ ಶಿಷ್ಟಾಚಾರಗಳ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದ್ದು, ನಾವು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ” ಎಂದಿದೆ.
ಬಾಪು ಅವರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿತ್ತು. ಶಸ್ತ್ರ ಚಿಕಿತ್ಸೆಯ ಅಪಾಯದ ಬಗ್ಗೆ ಮೊದಲೇ ರೋಗಿಗೆ ಹಾಗೂ ದಾನಿಗೆ ಹೇಳಲಾಗಿತ್ತು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇತ್ತ ಪುಣೆ ವೃತ್ತದ ಆರೋಗ್ಯ ಉಪ ನಿರ್ದೇಶಕರ ಹೆಚ್ಚುವರಿ ಉಸ್ತುವಾರಿಯನ್ನು ಹೊಂದಿರುವ ಜಿಲ್ಲಾ ಸಿವಿಲ್ ಸರ್ಜನ್ ಡಾ. ನಾಗನಾಥ್ ಯೆಂಪಲ್ಲೆ ಅವರು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದ್ದಾರೆ.
“ಸೋಮವಾರದೊಳಗೆ ಸಂಪೂರ್ಣ ಘಟನೆಯ ವಿವರಗಳನ್ನು ಒದಗಿಸುವಂತೆ ನಾವು ಆಸ್ಪತ್ರೆಯನ್ನು ಕೇಳಿದ್ದೇವೆ” ಎಂದು ಯೆಂಪಲ್ಲೆ ಹೇಳಿದ್ದಾರೆ.