ಡಿಜೆ ಹಳ್ಳಿ ಹಾಗೂ ಕೆ.ಜೆ.ಹಳ್ಳಿ ಗಲಭೆ ಪ್ರಕರಣದ ಮೂವರು ಆರೋಪಿಗಳಿಗೆ ಎನ್‌ಐಎ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ.
ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ತಪ್ಪೊಪ್ಪಿಕೊಂಡ ಮೂವರು ಆರೋಪಿಗಳಾದ ಎ-14 ಸೈಯದ್ ಇಕ್ರಮುದ್ದೀನ್ ಅಲಿಯಾಸ್ ನವೀದ್, ಎ-16 ಸೈಯದ್ ಆಸಿಫ್, ಎ-18 ಮೊಹಮ್ಮದ್ ಅತೀಫ್ ಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 46 ಸಾವಿರ ರೂಪಾಯಿ ದಂಡ ವಿಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ (NIA Special Court ) ಇಂದು ಆದೇಶ ಹೊರಡಿಸಿದೆ.
ಗಲಭೆ ನಡೆಸಿ ಬಳಿಕ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪವಿತ್ತು. ಈ ಸಂಬಂಧ ಯುಎಪಿಎ ಕಾಯ್ದೆ ಅಡಿ ಬಂಧಿತರಾಗಿದ್ದರು. ಎನ್‌ಐಎ ಪರ ಎಸ್‌ಪಿಪಿ ಪಿ.ಪ್ರಸನ್ನಕುಮಾರ್ ವಾದಿಸಿದ್ದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ನಿಂದನೆ ಮಾಡಲಾಗಿದೆ ಎಂದು ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಸಾಮಾಜಿಕ ಜಾಲಾತಾಣ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಅಂಶ ಹಂಚಿಕೊಂಡ ಆರೋಪದಿಂದ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಅಂದಿನ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಅವರ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ ಮನೆಯಲ್ಲಿದ್ದ ಎಲ್ಲ ವಸ್ತುಗಳನ್ನು ನಾಶ ಪಡಿಸಿದ್ದರು. ಈ ಸಂದರ್ಭದಲ್ಲಿ ಗಲಭೆ ನಿಯಂತ್ರಣ ಮಾಡಲು ಪೊಲೀಸರು ಗೊಲಿಬಾರ್ ನಡೆಸಿದ್ದರು.
ಈ ಆರೋಪ ಸಬಂಧ ಅರ್ಜಿದಾರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು.
ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸಬೇಕು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಕೋರಿದ್ದರು. ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರ ವಿರುದ್ಧ ದಾಖಲಿಸಿದ್ದ ಆರೋಪಗಳು ಸಾಬೀತಾಗಿಲ್ಲ. ಆದ್ದರಿಂದ ತಮ್ಮನ್ನು ಪ್ರಕರಣದಿಂದ ಮುಕ್ತಿಗೊಳಿಸಬೇಕು ಎಂದು ಕೋರಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಎನ್‌ಐಎ ಪರ ವಕೀಲರು, ಪ್ರಕರಣದಿಂದ ಮುಕ್ತಿ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಆದರೆ, ಆ ಆದೇಶವನ್ನು ಪ್ರಶ್ನಿಸಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಬೇಕು. ಅದಕ್ಕೆ ಬದಲಾಗಿ ಅರ್ಜಿದಾರರು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂದು ವಾದ ಮಂಡಿಸಿದ್ದರು.