ಕೊಚ್ಚಿ: ಮಾಲಿವುಡ್‌ನ ಖ್ಯಾತ ನಟ ಶೈನ್ ಟಾಮ್ ಚಾಕೊ ವಿರುದ್ಧ ಮಾದಕವಸ್ತು ಸೇವನೆಯ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ, ಬುಧವಾರ ರಾತ್ರಿ (ಏಪ್ರಿಲ್ 16) ಕೇರಳ ಪೊಲೀಸರ ವಿಶೇಷ ದಳ ಅವರಿರುವ ಹೋಟೇಲ್ ಮೇಲೆ ದಾಳಿ ನಡೆಸಿದೆ. ಕೊಚ್ಚಿಯಲ್ಲಿರುವ ಹೋಟೇಲ್‌ನಲ್ಲಿ ತಂಗಿದ್ದ ನಟ ಶೈನ್ ದಾಳಿಯ ಸಮಯದಲ್ಲಿ ಪರಾರಿಯಾದ ಘಟನೆ ಇದೀಗ ದೊಡ್ಡ ಸುದ್ದಿಯಾಗುತ್ತಿದೆ.
ಪೊಲೀಸರ ಪ್ರಾಥಮಿಕ ವರದಿಯಂತೆ, ಶೈನ್ ಟಾಮ್ ಚಾಕೊ ಅವರು ಇಬ್ಬರು ಸಹಚರರೊಂದಿಗೆ ಹೋಟೇಲ್‌ನ ಮೂರನೇ ಮಹಡಿಯಲ್ಲಿ ಇದ್ದಾಗ ದಾಳಿ ನಡೆದಿದೆ. ದಾಳಿಯನ್ನು ಗಮನಿಸಿದ ತಕ್ಷಣ, ನಟ ಮೂರನೇ ಮಹಡಿಯಿಂದ ಎರಡನೇ ಮಹಡಿಗೆ ಜಿಗಿದು, ನಂತರ ಈಜುಕೊಳವರೆಗೆ ಹಾರಿ, ರಿಸೆಫ಼್ನ್ ಭಾಗದ ಮೆಟ್ಟಿಲುಗಳ ಮೂಲಕ ಹೊರಗೆ ಓಡಿದ್ದಾಗಿ ತಿಳಿದುಬಂದಿದೆ.
ಪೊಲೀಸರು ತಕ್ಷಣವೇ ಶೋಧ ಕಾರ್ಯ ಆರಂಭಿಸಿದರೂ, ಶೈನ್ ತಲೆಮರೆಸಿಕೊಂಡಿದ್ದಾರೆ. ಅವರ ಹೋಟೇಲ್ ಕೋಣೆಯಲ್ಲಿ ಯಾವುದೇ ಮಾದಕವಸ್ತು ಪತ್ತೆಯಾಗಿಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿದ್ದಾರೆ. ಆದರೂ, ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಅರಿಯಲು ಶೈನ್ ಅವರನ್ನು ವಶಕ್ಕೆ ತೆಗೆದುಕೊಳ್ಳುವ ಕ್ರಮ ಮುಂದುವರಿಸಲಾಗಿದೆ. ಈ ಹಿಂದೆ, ಮಲಯಾಳಂ ನಟಿ ವಿನ್ಸಿ ಅಲೋಶಿಯಸ್ ಮಾಧ್ಯಮಗಳ ಮುಂದೆ “ಡ್ರಗ್ಸ್ ಸೇವಿಸುವ ನಟರೊಂದಿಗೆ ನಾನು ಚಲನಚಿತ್ರಗಳಲ್ಲಿ ಕೆಲಸ ಮಾಡುವುದಿಲ್ಲ” ಎಂದು ಹೇಳಿಕೆ ನೀಡಿದ್ದರು. ಅದಲ್ಲದೇ, ಶೈನ್ ಟಾಮ್ ಚಾಕೊ ಅವರ ವಿರುದ್ಧ ಡ್ರಗ್ಸ್ ಸೇವಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ ಹಾಗೂ ಕೇರಳ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ಶೈನ್ ಟಾಮ್ ಚಾಕೊ ಅವರು ‘ಉಂಡಾ’, ‘ತಲ್ಲುಮಾಲಾ’, ‘ಭೀಷ್ಮ ಪರ್ವಂ’ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಈ ಪ್ರಕರಣ ಮಾಲಿವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದೆ