ಪಂಜಾಬ್ : ಪಂಜಾಬ್ ರಾಜ್ಯದ ಜಲಂಧರ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಹೊರಗೆ ಭಾರೀ ಸ್ಪೋಟ ಸಂಭವಿಸಿದ್ದು, ಆಂತಕ ಸೃಷ್ಟಿಸಿದೆ. ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಭಾರೀ ಸ್ಫೋಟಕ್ಕೆ ಗಾಢ ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಗ್ರೇನೇಡ್ ದಾಳಿಯೇ ಅಥವಾ ಮತ್ತಿತರ ವಸ್ತುಗಳಿಂದ ಸಂಭವಿಸಿದ ಸ್ಫೋಟವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟದ ಶಬ್ದ ಕೇಳಿಸಿತು. ಈ ವೇಳೆ ಎಲ್ಲರೂ ಮಲಗಿದ್ದೆವು. ಭೂಮಿಯೇ ನಡುಗಿದ ಶಬ್ದ ಕೇಳಿಸಿತು. ನಂತರವೇ ಸ್ಫೋಟ ಎಂಬ ವಿಚಾರ ನನ್ನ ಗಮನಕ್ಕೆ ಬಂದಿತು. ಬಳಿಕ ನನ್ನ ಗನ್ ಮ್ಯಾನ್ ಅನ್ನು ಪೊಲೀಸ್ ಠಾಣೆಗೆ ಕಳುಹಿಸಿದೆ. ಸಿಸಿಟಿವಿ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ತಜ್ಞರು ಸಹ ಸ್ಥಳದಲ್ಲಿದ್ದಾರೆಂದು ಬಿಜೆಪಿ ನಾಯಕ ಮನೋರಂಜನ್ ಅವರು ಹೇಳಿದ್ದಾರೆ.