Friday, November 22
Share News

ಹಾಡಹಗಲೇ ಬೆಂಗಳೂರಿನಲ್ಲಿ ಯುವತಿಯೊಬ್ಬಳ ಅಪಹರಣ (Kidnap case ) ಆಗಿತ್ತು. ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಬಸ್‌ಗಾಗಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಅಪಹರಣಕೋರರು ಅಪಹರಿಸಿದ್ದಾರೆ.

ತುಮಕೂರಿನ ಕಾಲೇಜಿ ವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಯಲಹಂಕದ ಮಾವನ ಮನೆಗೆ ಬಂದಿದ್ದಳು. ನಂತರ ಬೆಳಗ್ಗೆ ಕಾಲೇಜಿಗೆ ಹೋಗಲು ತನ್ನ ಮಾವನಿಂದ ಬಸ್ ಸ್ಟಾಪ್‌ವರೆಗೂ ಡ್ರಾಪ್ ಪಡೆದಿದ್ದಾಳೆ. ಜಾಲಹಳ್ಳಿ ಬಳಿ ತುಮಕೂರು ಬಸ್‌ಗಾಗಿ ಕಾಯುತ್ತಿದ್ದಾಗ, ವಿದ್ಯಾರ್ಥಿನಿ ಬಳಿ ಇಬ್ಬರು ಯುವತಿಯರು ಬಂದಿದ್ದಾರೆ.

ತಕ್ಷಣ ಯುವತಿಯ ಕೈ ಹಿಡಿದು ನಂತರ ಮುಖಕ್ಕೆ ಮಾಸ್ಕ್ ಹಿಡಿದಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬೆಳಗ್ಗೆ ಕಿಡ್ನ್ಯಾಪ್ ಆಗಿದ್ದ ವಿದ್ಯಾರ್ಥಿನಿಗೆ ಮಧ್ಯಾಹ್ನ 1 ಗಂಟೆಗೆ ಎಚ್ಚರವಾಗಿದೆ. ಈ ವೇಳೆ ಕಾರಿನಲ್ಲಿ ಇಬ್ಬರು ಯುವತಿಯರು ಸೇರಿ ನಾಲ್ವರು ಹುಡುಗರು ಇದ್ದರು ಎನ್ನಲಾಗಿದೆ.

ವಿದ್ಯಾರ್ಥಿನಿಗೆ ಎಚ್ಚರವಾದಾಗ ಆರೋಪಿಗಳು ಗಾಡಿ ನಿಲ್ಲಿಸಿ ಟೀ ಕುಡಿಯುತ್ತಿದ್ದರು. ತಕ್ಷಣ ಕಾರಿನ ಡೋರ್ ಓಪನ್ ಮಾಡಿ ವಿದ್ಯಾರ್ಥಿನಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಆರೋಪಿಗಳು ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಬಳಿಕ ಸ್ಥಳೀಯರ ಬಳಿ ಇದು ಯಾವ ಊರು ಎಂದು ಕೇಳಿದಾಗ ಅವರು, ಇದು ಮೈಸೂರು ಎಂದು ತಿಳಿಸಿದ್ದಾರೆ. ಬಳಿಕ ಅವರಿವರ ಸಹಾಯದಿಂದ ಮೈಸೂರು ಬಸ್ ಸ್ಟಾಪ್‌ಗೆ ಬಂದಿದ್ದಾಳೆ. ನಂತರ ವ್ಯಕ್ತಿಯೊಬ್ಬರ ಮೊಬೈಲ್ ಪಡೆದು ಮನೆಗೆ ಕರೆ ಮಾಡಿದ್ದಾಳೆ. ಕೂಡಲೇ ಕುಟುಂಬಸ್ಥರ ಸಹಾಯದಿಂದ ಮೈಸೂರು ಠಾಣೆಗೆ ದೂರು ದಾಖಲಾಗಿದೆ.

ದೂರಿನನ್ವಯ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದ್ದು, ವಿದ್ಯಾರ್ಥಿನಿ ಜಾಲಹಳ್ಳಿ ಕ್ರಾಸ್‌ನಿಂದ ಕಿಡ್ನಾಪ್ ಆದ ಕಾರಣಕ್ಕೆ ಪೀಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅಪಹರಣಕೋರರಿಂದ ವಿದ್ಯಾರ್ಥಿನಿ ತಪ್ಪಿಸಿಕೊಂಡು ಬಚಾವ್‌ ಆಗಿದ್ದಾಳೆ. ಸದ್ಯ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.


Share News

Comments are closed.

Exit mobile version