Friday, November 22
Share News

ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಇಂದು (ನ.5) ಮತದಾನ ನಡೆಯಲಿದೆ. ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರೂ ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಅಮೆರಿಕದ ಜನಗಣತಿ ಬ್ಯೂರೊ ಪ್ರಕಾರ, 15.5 ಕೋಟಿ ಅಮೆರಿಕನ್ನರು ಮತದಾನ ಮಾಡಲು ಅರ್ಹರಾಗಿದ್ದಾರೆ. ನವೆಂಬರ್ 2ರವರೆಗೆ 7.5 ಕೋಟಿಗೂ ಹೆಚ್ಚು ಮಂದಿ ಆನ್‌ಲೈನ್ (ಮೇಲ್-ಇನ್ ವೋಟಿಂಗ್) ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಫ್ಲಾರಿಡಾ ವಿ.ವಿ ನೀಡಿರುವ ಅಂಕಿ ಅಂಶಗಳು ಹೇಳಿವೆ.

ಚುನಾವಣಾ ಪೂರ್ವ ಸಮೀಕ್ಷೆಗಳು ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಸಮಬಲದ ಹೋರಾಟ ನಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳಲ್ಲಿ ಟ್ರಂಪ್ ಕೊಂಚ ಮುನ್ನಡೆ ಅನುಭವಿಸಿದ್ದರೆ, ಇನ್ನೂ ಕೆಲವು ಸಮೀಕ್ಷೆಗಳ ಪ್ರಕಾರ ಕಮಲಾ ಮುಂದಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ 46 ಮಂದಿ ಕಮಲಾ ಹ್ಯಾರಿಸ್ ಪರ ಒಲವು ತೋರಿದ್ದರೆ, ಶೇ 43ರಷ್ಟು ಮಂದಿ ಟ್ರಂಪ್ ಅಧ್ಯಕ್ಷರಾಗುವುದನ್ನು ಬಯಸಿದ್ದಾರೆ.

ಟ್ರಂಪ್‌ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದು ಇದು ಮೂರನೇ ಬಾರಿ. 2016ರಲ್ಲಿ ಗೆದ್ದಿದ್ದರೆ, 2020ರಲ್ಲಿ ಜೋ ಬೈಡನ್ ವಿರುದ್ಧ ಸೋತಿದ್ದರು. ಈ ಬಾರಿ ಅವರು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದು ಪ್ರಕರಣದಲ್ಲಿ ದೋಷಿ ಎಂಬುದೂ ಸಾಬೀತಾಗಿದೆ. ಪ್ರಚಾರದ ಸಂದರ್ಭದಲ್ಲಿ ಎರಡು ಬಾರಿ ಅವರ ಹತ್ಯೆ ಯತ್ನ ನಡೆದಿದೆ.

ಅವರಿಗೆ ರಿಪಬ್ಲಿಕನ್ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಹಿಂದಿನ ಎರಡು ಚುನಾವಣೆಗಳಲ್ಲೂ ಟ್ರಂಪ್ ಅವರಿಗೆ ಶೇ 50ಕ್ಕಿಂತ ಹೆಚ್ಚು ಮತಗಳು ಬಂದಿರಲಿಲ್ಲ. ಹಾಗಾಗಿ, ಈ ಬಾರಿಯೂ ಅವರು ಅಷ್ಟು ಮತ ಗಳಿಸುವುದು ಕಷ್ಟ ಎಂದು ಹೇಳಲಾಗುತ್ತಿದೆ.


Share News

Comments are closed.

Exit mobile version