ತ್ರಿಶೂರ್: ಅತಿ ವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿಯ ಟೆಂಟ್ ನಲ್ಲಿ ಮಲಗಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟು, 7 ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಕೇರಳದ ನಾಟ್ಟಿಗದಲ್ಲಿ ನಡೆದಿದೆ.
ಪಾಲಕ್ಕಾಡ್ ಗೋವಿಂದಪುರಂ ನಿವಾಸಿಗಳಾದ ಕಾಳಿಯಪ್ಪನ್ (50), ನಾಗಮ್ಮ (39), ಬಂಗಾಜಿ (20), ಜೀವನ್ (4) ಮತ್ತು ವಿಶ್ವ (1) ಮೃತರು. ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಜೆಕೆ ಥಿಯೇಟರ್ ಬಳಿ ಅಪಘಾತ ಸಂಭವಿಸಿದ್ದು, ಗಾಯಗೊಂಡ 7 ಮಂದಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮರ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಟೆಂಟ್ ನಲ್ಲಿ ಮಲಗಿದ್ದ ಜನರ ಮೇಲೆ ಹರಿದಿದೆ. ಘಟನೆಯ ಬೆನ್ನಲ್ಲೇ ಲಾರಿ ಚಾಲಕ ಕಣ್ಣೂರಿನ ಅಲೆಕ್ಸ್ (33) ಮತ್ತು ಕ್ಲೀನರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ರಸ್ತೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಟೆಂಟ್ ನಲ್ಲಿ ಇವರು ಮಲಗಿದ್ದರು. ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿತ್ತು. ಲಾರಿ ಚಾಲಕ “ಡೈವರ್ಷನ್ ಬೋರ್ಡ್” ಅನ್ನು ನಿರ್ಲಕ್ಷಿಸಿ ಲಾರಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.