ಪುತ್ತೂರು: ವಾರಾಂತ್ಯದಲ್ಲಿ ನಡೆಯುತ್ತಿರುವ ಜಿಎಲ್ ಮಾಲ್ ಉತ್ಸವದಲ್ಲಿ ಈ ಬಾರಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಡಿ. 28ರಂದು ಬೆಳಿಗ್ಗೆ ರೋಟರಿ ಕ್ಲಬ್ ಪುತ್ತೂರು ಯುವ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ, ಜಿಎಲ್ ವನ್ ಮಾಲ್ ಆಶ್ರಯದಲ್ಲಿ ಹಲವು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ.
ಬಹುಮಾನವಾಗಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಹೆಸರು ನೋಂದಾವಣೆಗೆ ಕೊನೆಯ ದಿನಾಂಕ ಡಿ. 26. ಸ್ಪರ್ಧಿಗಳು ಗೂಗಲ್ ಫಾರ್ಮ್ ಭರ್ತಿ ಮಾಡಬೇಕು.
ಸ್ಪರ್ಧಾರ್ಥಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸ್ಥಳಕ್ಕೆ ಹಾಜರಾಗಬೇಕು. ರಸ್ತೆ ಸುರಕ್ಷತೆ, ನಮ್ಮೂರ ಜಾತ್ರೆ, ಸ್ವಚ್ಛ ನಗರ ಎಂಬ ಮೂರು ವಿಷಯವನ್ನು ಸ್ಪರ್ಧೆಗೆ ನೀಡಿದ್ದು, ಇದರಲ್ಲಿ ಒಂದನ್ನು ಚೀಟಿ ಎತ್ತುವ ಮೂಲಕ ಸ್ಥಳದಲ್ಲೇ ಆಯ್ಕೆ ಮಾಡಲಾಗುವುದು. ಚಿತ್ರ ಬಿಡಿಸಲು ಕಾಗದ ಹಾಳೆಯನ್ನು ಒದಗಿಸಲಾಗುವುದು, ಬಣ್ಣ ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಗುಂಪು ಪ್ರವೇಶಕ್ಕೆ ಅವಕಾಶವಿಲ್ಲ
ವಿಭಾಗಗಳು:
ಪ್ರಾಥಮಿಕ, ಪ್ರೌಢ ಶಾಲಾ, ಪಿಯುಸಿ, ಪದವಿ ಕಾಲೇಜು, ಸ್ನಾತಕೋತ್ತರ ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಇದಲ್ಲದೇ, ವಿಶೇಷವಾಗಿ ದಿವ್ಯಾಂಗ ಕಲಾವಿದರಿಗೆ (15 ವರ್ಷ ಮೇಲ್ಪಟ್ಟ) ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 94485 46663 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಬಹುಮಾನ ವಿತರಣೆ:
ಮಧ್ಯಾಹ್ನ 1 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಜಿಎಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ, ರೋಟರಿ ಜಿಲ್ಲೆ 3181 ಇದರ ರಸ್ತೆ ಸುರಕ್ಷತೆ ಛೇರ್ ಮೆನ್ ಹರ್ಷ ಕುಮಾರ್ ರೈ ಅತಿಥಿಗಳಾಗಿರುವರು. ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ ರಾಜ್ ಅಧ್ಯಕ್ಷತೆ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.



























