ಮಂಗಳೂರು : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಟ್ರೇಲರ್ ಬೋಟ್ ನ ಇಂಜಿನ್ ಸಮುದ್ರದಲ್ಲಿ ಕೆಟ್ಟುಹೋಗಿ, ಅಲೆಗಳ ನೆರವಿಂದ ಅದೃಷ್ಟವಶಾತ್ ತೇಲುತ್ತಾ ಬಂದು ಉಳ್ಳಾಲ ದ ಸೀಗೌಂಡ್ ಬಳಿ ದಡ ಸೇರುವ ಮೂಲಕ 13 ಮಂದಿ ಮೀನುಗಾರರು ಜೀವಾಪಾಯಗಳಿಂದ ಪಾರಾದ ಘಟನೆ ನಡೆದಿದೆ.
ಸಮುದ್ರ ಮಧ್ಯೆ ಕೆಟ್ಟು ಹೋದ ಬುರಾಕ್ ಟ್ರಾಲರ್ ಬೋಟು ಉಳ್ಳಾಲ ಮುಕ್ಕಚ್ಚೇರಿಯ ಮೊಹ್ಮದ್ ಅಲ್ಫಾಕ್ ನವರದ್ದಾಗಿದೆ.
ಮಂಗಳೂರು ಹಳೆ ಬಂದರು ಧಕ್ಕೆಯಿಂದ ಅರಬೀಸಮುದ್ರ ಮೂಲಕ ಕೇರಳದತ್ತ ಮೀನುಗಾರಿಕೆಗೆ ಭಾನುವಾರ ರಾತ್ರಿ ಹೊರಟಿದ್ದು ಮಧ್ಯೆ ಸಮುದ್ರದಲ್ಲಿ ಎಂಜಿನ್ ವೈಫಲ್ಯದಿಂದ ಬೋಟ್ ಕೆಟ್ಟು, ಚಲಿಸದೇ ನಿಂತಿತ್ತು. ಮಧ್ಯರಾತ್ರಿ ಬೋಟ್ ಕೆಟ್ಟು ನಿಂತರೂ ಇತರ ಮೀನುಗಾರಿಕಾ ದೋಣಿಗಳಲ್ಲಿದ್ದವರ ಗಮನಕ್ಕಿದು ಬಂದಿರಲಿಲ್ಲ.
ಇದರಿಂದಾಗಿ ಬೋಟಿನಲ್ಲಿದ್ದ 13 ಮಂದಿ ಮೀನುಗಾರರು ಪ್ರಾಣ ಭಯದೊಂದಿಗೆ ನಡು ಸಮುದ್ರದಲ್ಲಿ ಉಳಿದರು.
ಆದರೆ ಅದೃಷ್ಟವಶಾತ್ ಅಲೆಗಳ ಪ್ರಭಾವದಿಂದ ತೇಲುತ್ತಾ ಸಾಗಿದ ಬೋಟು ಸೋಮವಾರ ನಸುಕಿನ ವೇಳೆಗೆ ಉಳ್ಳಾಲ ಸೀ ಗೌಂಡ್ ಸಮೀಪ ತೀರಕ್ಕೆ ಬಂದಿದೆ
ಘಟನೆಯಿಂದಾಗಿ ಬೋಟ್ ಹಾನಿಗೊಳಗಾಗಿದೆ.ಮಾಲಕರಿಗೆ ಲಕ್ಷಾಂತರ ನಷ್ಟ ಉಂಟಾಗಿದೆ. ಪ್ರಾಣಭಯದಿಂದ ಕಳೆದ ಮೀನುಗಾರರು ಮುಂಜಾನೆ ಬೆಳಕು ಹರಿಯುವ ವೇಳೆಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
.