ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಡುಗೆಮನೆ ಆಧುನಿಕ ಸ್ಪರ್ಶದೊಂದಿಗೆ ಅತ್ಯಾಕರ್ಷಕವಾಗಿ ಕಾಣಿಸುತ್ತಿದೆ.
ಈ ಅಡುಗೆ ಮನೆ ಆಧುನಿಕ ತಂತ್ರಜ್ಞಾನಗಳಿಂದ ಕೂಡಿ ಹೈಟೆಕ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ತರಕಾರಿ ಕತ್ತರಿಸುವುದರಿಂದ ತೊಡಗಿ ಪ್ರತಿಯೊಂದಕ್ಕೂ ಯಂತ್ರಗಳಿವೆ. ಚಪಾತಿ ಪುಡಿಯನ್ನು ಕಲಸುವುದಕ್ಕೆ, ಕಲಸಿದ ಹಿಟ್ಟನ್ನು ಚಪಾತಿಯಾಗಿ ಮಾಡುವುದಕ್ಕೆ, ಹಾಗೆ ಮಾಡಿದ ಚಪಾತಿಯನ್ನು ಬೆಂಕಿಯ ಮೇಲಿನ ಬೇಯಿಸುವ ತಾಣಕ್ಕೆ ಒಯ್ಯುವುದಕ್ಕೆ ಹಾಗೂ ಬೆಂದ ಚಪಾತಿಯನ್ನು ನಿರ್ದಿಷ್ಟ ಜಾಗಕ್ಕೆ ತಲಪಿಸುವುದಕ್ಕೆ ಯಂತ್ರದ ವ್ಯವಸ್ಥೆ ಇದೆ. ಗಂಟೆಗೆ ಸರಿಸುಮಾರು 600ರಿಂದ 800 ಚಪಾತಿ ಈ ಯಂತ್ರದ ಮೂಲಕ ತಯಾರಾಗುತ್ತಿದೆ. ಅಗತ್ಯ ಬಿದ್ದಾಗ ಚಪಾತಿ ಬದಲಿಗೆ ಪೂರಿ ಮಾಡಿಕೊಡುವುದಕ್ಕೂ ಈ ಯಂತ್ರ ಬಳಕೆಯಾಗುತ್ತದೆ.
ಇನ್ನು ಅನ್ನ ಬೇಯಿಸುವುದಕ್ಕೆ ಸ್ಟೀಂ ವ್ಯವಸ್ಥೆಯನ್ನು ರೂಪಿಸಲಾಗಿದೆ. ಹಾಗಾಗಿ ಕೇವಲ ಹದಿನೈದು ನಿಮಿಷದಲ್ಲಿ ಬೆಳ್ತಿಗೆ ಹಾಗೂ ಮೂವತ್ತು ನಿಮಿಷದಲ್ಲಿ ಕುಚ್ಚಿಲು ಅಕ್ಕಿ ಬೆಂದು ಅಪಾರ ಸಮಯ ಹಾಗೂ ಇಂಧನ ಉಳಿತಾಯಕ್ಕೂ ಕಾರಣವಾಗಿದೆ. ತರಕಾರಿಗಳನ್ನೂ ಈ ಸ್ಟೀಂ ವ್ಯವಸ್ಥೆಯಲ್ಲಿ ಸುಲಭಕ್ಕೆ ಹಾಗೂ ಅತ್ಯಂತ ಶುಚಿಯಾಗಿ ಬೇಯಿಸಲು ಸಾಧ್ಯವಾಗುತ್ತಿದೆ. ಹಾಲುಕುದಿಸುವುದಕ್ಕೂ ಇದರಿಂದ ಸಾಧ್ಯ.
ಇಂಥದ್ದೊಂದು ಆಧುನಿಕ ಅಡುಗೆ ಮನೆಗೆ ಸಾಕಷ್ಟು ದುಡ್ಡೂ ವೆಚ್ಚವಾಗಿದೆ. ಸರಿಸುಮಾರು 40 ಲಕ್ಷ ರೂಪಾಯಿಗಳಲ್ಲಿ ಈ ಅಡುಗೆಮನೆ ರೂಪುಗೊಂಡಿದೆ. ಈ ಆಧುನಿಕ ಅಡುಗೆಮನೆಯನ್ನು ಅನೇಕ ಹೆತ್ತವರು ಶ್ಲಾಘಿಸಿದ್ದಾರೆ. ಇಲ್ಲಿನ ಶುಚಿತ್ವ, ವೇಗಗಳನ್ನು ಕೊಂಡಾಡಿದ್ದಾರೆ.
ಈ ವಿನೂತನ ಅಡುಗೆ ಮನೆಯಿಂದಾಗಿ ನಮಗೆ ನಿರ್ವಹಣೆ ಅತ್ಯಂತ ಸುಲಭದ್ದೆನಿಸುತ್ತಿದೆ. ಅನ್ನ, ಸಾರು, ಸಾಂಬಾರುಗಳಲ್ಲಿ ಹೆಚ್ಚಳವಾಗಬೇಕಿದ್ದರೂ ತಕ್ಷಣಕ್ಕೆ ತಯಾರು ಮಾಡುವುದಕ್ಕೆ ಸಾಧ್ಯವಾಗುತ್ತಿದೆ. ಕೆಲಸ ಕಾರ್ಯಗಳನ್ನು ಚುರುಕಾಗಿ ನಡೆಸಿಕೊಡುವಲ್ಲಿ ಈ ಯಾಂತ್ರೀಕರಣ ನಮಗೆ ಸಹಕಾರಿಯಾಗಿದೆ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಅವರ ಮಾತು.
ಶುಚಿರುಚಿಯಾದ ಆಹಾರ, ಜರೂರ್ ಸಿದ್ಧ:
ಸಾವಿರಾರು ಮಕ್ಕಳು ನಮ್ಮನ್ನು ಆಶ್ರಯಿಸಿರುವಾಗ ಅವರೆಲ್ಲರನ್ನೂ ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕ್ಷಣಕಾಲವೂ ಆ ಮಕ್ಕಳು ಹಸಿವಿನಲ್ಲಿರುವುದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಹಾಗಾಗಿ ಶುಚಿ ರುಚಿಯಾದ ಆಹಾರ ವ್ಯವಸ್ಥೆ ಜರೂರಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಇಂತಹ ಹೈಟೆಕ್ ಅಡುಗೆಮನೆಯನ್ನು ರೂಪಿಸಿದ್ದೇವೆ.
– ಸುಬ್ರಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು