ಕಡಬದಲ್ಲಿ ನಡೆದಿರುವ ಆ್ಯಸಿಡ್ ದಾಳಿ ಪ್ರಕರಣ ಹಿನ್ನೆಲೆಯಲ್ಲಿ ಎಸ್ಪಿ ರಿಷ್ಯಂತ್ ಅವರು ಕಡಬ ಪ.ಪೂ. ಕಾಲೇಜಿಗೆ ಭೇಟಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಮುಖ ಆರೋಪಿ, ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕಿನ ಎಂ.ಬಿ.ಎ. ವಿದ್ಯಾರ್ಥಿ ಅಬೀನ್ (23ವ) ಎಂಬಾತನನ್ನು ವಿದ್ಯಾರ್ಥಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿದ್ಯಾರ್ಥಿನಿಯೋರ್ವಳು ಗಂಭೀರ ಗಾಯಗೊಂಡಿದ್ದು, ಇನ್ನಿಬ್ಬರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದ ಕಾರಣ ಕಾಲೇಜಿಗೆ ಬೇರೆ ಬೇರೆ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದಿದ್ದು ಈತ ಕೂಡ ಕಾಲೇಜಿಗೆ ಸಮವಸ್ತ್ರದಲ್ಲಿ ಬಂದು ಕಾದು ಕುಳಿತ್ತಿದ್ದ. ಇದೇ ವೇಳೆ ಸಂತ್ರಸ್ತೆಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಆಕೆಯ ಪಕ್ಕದಲ್ಲೇ ಕುಳಿತಿದ್ದ ಇಬ್ಬರು ಸಹಪಾಠಿ ವಿದ್ಯಾರ್ಥಿನಿಯರೂ ಆ್ಯಸಿಡ್ ದಾಳಿಗೆ ಒಳಗಾಗಿದ್ದಾರೆ ಎಂದು ವಿವರಿಸಿದರು.
ಆರೋಪಿ ಕಾಲೇಜು ಸಮವಸ್ತ್ರದಲ್ಲಿದ್ದ ಕಾರಣ ಇತರರ ಕೈವಾಡ ಇರಬಹುದೇ ಎಂಬ ಪ್ರಶ್ನೆಗೆ, ತನಿಖೆಯಿಂದ ಬೆಳಕಿಗೆ ಬರಬೇಕಷ್ಟೇ ಎಂದುತ್ತರಿಸಿದರು.
ಯುವಕ ದೂರದ ಸಂಬಂಧಿಯಾಗಿದ್ದ ಸಂತ್ರಸ್ತೆಯನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ ಈ ಆ್ಯಸಿಡ್ ದಾಳಿ ಮಾಡಿದ್ದಾನೆ. ಆ್ಯಸಿಡ್ ದಾಳಿ ನಡೆಸಲು ಆರೋಪಿ ರಾತ್ರಿಯೇ ಕೇರಳದಿಂದ ಬಂದಿದ್ದ ಎಂದು ವಿವರಿಸಿದರು.
ಡಿ.ವೈ.ಎಸ್.ಪಿ. ಅರುಣ್ ನಾಗೇಗೌಡ, ಪುತ್ತೂರು ಉಪ ವಿಭಾಗಾಧಿಕಾರಿ ಜೊಬಿನ್ ಮಹಾಪಾತ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.