ಮಂಗಳೂರು: ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತಿದ್ದು, ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮೊದಲಾದ ಸಮಸ್ಯೆಗಳ ನಿಯಂತ್ರಣಕ್ಕೆ ಯೋಗ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಮಂಗಳೂರು ಎ.ಜೆ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ. ಮನೋಹರ್ ವಿ.ಆರ್. ಹೇಳಿದರು.
ಯೆನೆಪೋಯ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸಸ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ 2024ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯೋಗ ಮಾಡುವಾಗ ಮಾಂಸಖಂಡಗಳು ಚುರುಕಾಗಿ ಸಕ್ಕರೆ ಅಂಶ ಕಡಿಮೆ ಆಗುತ್ತದೆ. ಯೋಗದಿಂದ ರಕ್ತನಾಳಗಳಲ್ಲಿ ರಕ್ತದ ಸಂಚಾರ ಉತ್ತಮಗೊಂಡು ಕಿಡ್ನಿ ವೈಫಲ್ಯದಂತಹ ಗಂಭೀರ ಸಮಸ್ಯೆಗಳು ಕಡಿಮೆ ಆಗುತ್ತವೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸ್ಪರ್ಶ ಜ್ಞಾನ ಕಳೆದುಕೊಂಡು, ಗ್ಯಾಂಗ್ರೀನ್ ಗೆ ತುತ್ತಾಗುವುದು ಸಾಮಾನ್ಯ. ನಿಯಮಿತವಾಗಿ ಯೋಗ ಮಾಡುತ್ತಿದ್ದರೆ, ನರದ ಕಾರ್ಯ ಉತ್ತಮಗೊಂಡು ಸ್ಪರ್ಶ ಜ್ಞಾನವನ್ನು ಉತ್ತಮ ಪಡಿಸುವುದಲ್ಲದೇ, ಗ್ಯಾಂಗ್ರೀನ್ ಪ್ರಮಾಣ ಕಡಿಮೆ ಮಾಡುವ ಸಾಧ್ಯತೆ ಕಡಿಮೆ ಎಂದು ವಿವರಿಸಿದರು.
ಕೊಬ್ಬಿನ ಅಂಶ ಕಡಿಮೆ ಆಗುವುದೇ ಬಿಪಿ ಅಥವಾ ರಕ್ತದೊತ್ತಡಕ್ಕೆ ಒಂದು ಕಾರಣ. ನಿಯಮಿತ ಯೋಗಾಭ್ಯಾಸದಿಂದ ರಕ್ತದಲ್ಲಿ ಕೊಬ್ಬಿನ ಅಂಶ ಕಡಿಮೆಗೊಳ್ಳುತ್ತದೆ. ಮಾನಸಿಕ ಒತ್ತಡದಿಂದ ಉಂಟಾಗುವ ದೇಹದ ಹಾರ್ಮೋನ್ (nor adrenaline) ಕಡಿಮೆಯಾಗಿ ಬಿಪಿ ನಿಯಂತ್ರಣಕ್ಕೆ ಬರಲು ಸಹಕಾರಿ ಎಂದರು.
ಗಾಬಾ, ಸೆರೊಟೊನಿನ್ ಎಂಬ ಮೆದುಳಿನ ಹಾರ್ಮೋನ್ ಗಳು ನಿಯಮಿತ ಯೋಗಾಭ್ಯಾಸದಿಂದ ಹೆಚ್ಚಳಗೊಂಡು ಒತ್ತಡ ಹಾಗೂ ಉದ್ವೇಗ ಕಡಿಮೆ ಆಗುತ್ತವೆ. ಸೆರೊಟೊನಿನ್ ನಿದ್ದೆಗೆ ಕಾರಣವಾಗುವ ಹಾರ್ಮೋನ್. ಲೆಪ್ಟಿನ್ ಎನ್ನುವ ಹಾರ್ಮೋನ್ ಹೆಚ್ಚಾಗಿ ಕೊಬ್ಬಿನಂಶ ಅಥವಾ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ ಎಂದ ಅವರು, ಕ್ರೋಮೋಸೋಮಿನ ಒಂದು ಅಂಶವಾದ ಟಿಲೋಮಿಯರ್ ನ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ವೃದ್ಧಾಪ್ಯವನ್ನು ದೂರ ಮಾಡುತ್ತದೆ.
ರೋಗಗಳ ಪ್ರಮಾಣ ಜಾಸ್ತಿಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯೋಗ ನಮ್ಮ ದಿನನಿತ್ಯದ ಜೀವನದಲ್ಲಿ ತೀರಾ ಅಗತ್ಯವಾಗಿದೆ. ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಪಡೆದುಕೊಳ್ಳುವ ಜೊತೆಗೆ ಯೋಗವನ್ನು ದೈನಂದಿನ ಜೀವನದ ಭಾಗವಾಗಿ ಮಾಡಿಕೊಳ್ಳುವುದು ಇಂದು ಅನಿವಾರ್ಯ. ಬಿಪಿ, ಶುಗರ್ ಸೇರಿದಂತೆ ಅನೇಕ ರೋಗಗಳಿಗೆ ನಮ್ಮ ಪಾರಂಪರಿಕ ಯೋಗ ಔಷಧವಾಗಿ ಬಳಕೆಯಾಗುತ್ತಿರುವುದು ಸಂತೋಷದ ವಿಚಾರ ಎಂದರು.
ಸಂಸ್ಥೆಯ ಪ್ರಾಂಶುಪಾಲ ಡಾ. ಪುನೀತ್ ರಾಘವೇಂದ್ರ ಉಪಸ್ಥಿತರಿದ್ದರು.