ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾ ಸಂಭ್ರಮ, ಬಹುಮಾನ ವಿತರಣೆ ‘ಸಮ್ಮಾನ ರಶ್ಮಿ’ ಹಾಗೂ ವಾರ್ಷಿಕೋತ್ಸವ ಸಮಾರಂಭ ‘ಸಂಭ್ರಮ ರಶ್ಮಿ’ ಡಿ.14, 19 ಹಾಗೂ 20 ರಂದು ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ಸಂಸ್ಥೆಯಲ್ಲಿ ಎಲ್ ಕೆಜಿ, ಪಿಯುಸಿ, ಬಿಸಿಎ (ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ) ವ್ಯಾಸಂಗಗಳು ನಡೆಯುತ್ತಿದ್ದು, ಶಿಕ್ಷಣದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನವನ್ನು ಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ತರಗತಿ, ಲ್ಯಾಬೋರೇಟರಿ, ಸ್ಮಾರ್ಟ್ ಬೋರ್ಡ್, ಅಟಲ್, ವಸತಿನಿಲಯಗಳು, ಆಟದ ಮೈದಾನ, ಮಕ್ಕಳ ಭದ್ರತೆಗಾಗಿ ಸಿಸಿ ಕ್ಯಾಮರಾ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೆ. ಹತ್ತನೇ ತರಗತಿಯಲ್ಲಿ 15 ಬಾರಿ ಶೇ.100 ಫಲಿತಾಂಶ, ಪಿಯುಸಿ ವಾಣಿಜ್ಯ ವಿಭಾಗದಲ್ಲಿ 10 ಬಾರಿ, ವಿಜ್ಞಾನ ವಿಭಾಗದಲ್ಲಿ 4 ಬಾರಿ ಶೇ.100 ಫಲಿತಾಂಶ ಪಡೆದಿದೆ ಎಂದು ತಿಳಿಸಿದರು.
ಡಿ.14 ರಂದು ನಡೆಯುವ ವಾರ್ಷಿಕ ಕ್ರೀಡಾಕೂಟವನ್ನು ನಗರ ಠಾಣಾ ಪೊಲೀಸ್ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಉದ್ಘಾಟಿಸಲಿದ್ದಾರೆ. ಡಿ.19 ರಂದು ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಸುಬ್ರಹ್ಮಣ್ಯೇಶ್ವರ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಪಾಲ್ಗೊಳ್ಳಲಿದ್ದು, ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಎಸ್,ಎನ್.ಆರ್. ರೂರಲ್ ಎಜ್ಯುಕೇಶನ್ ನ ಟ್ರಸ್ಟಿ ಸುಂದರ ರೈ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ್ ಪ್ರಸಾದ್ ರೈ ಕಲಾಯಿ ಉಪಸ್ಥಿತರಿರುವರು ಎಂದರು ತಿಳಿಸಿದರು.
ಡಿ.20 ರಂದು ನಡೆಯುವ ವಾರ್ಷಿಕೋತ್ಸವ ಸಮಾರಂಭ “ಸಂಭ್ರಮ ರಶ್ಮಿ’ ಯನ್ನು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಎಸಿಪಿ ನಝ್ಮ ಫಾರೂಖಿ, ನಿವೃತ್ತ ಪ್ರಾಂಶುಪಾಲ ಡಾ.ಡಿ.ಮಾಧವ ಭಟ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಎಸ್, ಎನ್, ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ನಿರ್ದೇಶಕ ಮಹೇಶ್ ರೈ, ವಿದ್ಯಾರಶ್ಮಿ ಪಿಯು ಕಾಲೇಜು ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ ಉಪಸ್ಥಿತರಿದ್ದರು.