ಪುತ್ತೂರು: ಕೇರಳದ ವಯನಾಡಿನಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಭೂಕುಸಿತ ದುರಂತಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ನಲ್ಲಿ ಕೋಮುದ್ವೇಷ ಭಾವನೆ ಹುಟ್ಟಿಸುವ ಸಂದೇಶ ರವಾನಿಸಿದ ಪ್ರಕರಣದ ಆರೋಪಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದುರಂತದಲ್ಲಿ ಸಾವಿಗೀಡಾದವರನ್ನು ಉದ್ದೇಶಿಸಿ ಪುತ್ತೂರು ಡಾಕ್ಟರ್ ಇನ್ನಿತರ ಗ್ರೂಪ್ಗಳಲ್ಲಿ ಒಂದು ಸಮುದಾಯದ ವಿರುದ್ಧ ಪೋಸ್ಟ್ ಮಾಡಿ ಸಂದೇಶ ವಿನಿಮಯ ಮಾಡಿಕೊಂಡಿರುವುದು ಧರ್ಮದ ಮಧ್ಯೆ, ಕೋಮು ದ್ವೇಷ ಭಾವನೆ ಹುಟ್ಟಿಸುವ, ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವಂತಹ, ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳು ಇರುವುದರಿಂದ ಈ ಕುರಿತು ಕಾನೂನು ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಠಾಣೆಯ ಎಸ್.ಐ.ಆಂಜನೇಯ ರೆಡ್ಡಿ ಅವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಡಾ.ಪ್ರವೀಣ್ ಪಾರೆ, ಅಖಿಲ್ ಮತ್ತು ಶರತ್ ಮಾಡಾವು ಎಂಬವರ ವಿರುದ್ದ ಪೊಲೀಸರು ಸೆಕ್ಷನ್ 353(2)ಬಿಎನ್ಸ್ 2023 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಗಳ ಪೈಕಿ ಶರತ್ ಮಾಡಾವು ರವರ ಪರ ವಕೀಲರು ಸಲ್ಲಿಸಿದ ಮಧ್ಯಂತರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಶರತ್ ಮಾಡಾವು ರವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರೂಗಿಸದಂತೆ ಪ್ರತಿವಾದಿ ಪೋಲಿಸರಿಗೆ ಆದೇಶಿಸಿತ್ತು. ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಪರ ವಕೀಲರಾದ ಚಾಣಕ್ಯ ಲಾ ಚೇಂಬರ್ ನ ಶ್ಯಾಮ್ ಪ್ರಸಾದ್ ಕೈಲಾರ್ ಮತ್ತು ಸುಮಾ ಟಿ.ಆರ್ ವಾದಿಸಿದ್ದರು.