ಉಡುಪಿ: ನವರಾಜ್ 2024ರ ಜೂ. 23ರಂದು ಬ್ರಹ್ಮಾವರದ ಹಂದಾಡಿಯ ಚೈತ್ರಾ (36) ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ವಿಚಾರ ಬಚ್ಚಿಟ್ಟು 2024ರ ಜುಲೈ 29ರಂದು ನಂದಿನಿ ಎನ್ನುವಾಕೆಯನ್ನು ವಿವಾಹವಾಗಿದ್ದ. 2024ರ ಸೆ.5ರಂದು ಬ್ರಹ್ಮಾವರ ಮದರ್ ಪ್ಯಾಲೆಸ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚೈತ್ರಾಳನ್ನು ಮದುವೆಯಾಗಿದ್ದ.
ಮದುವೆ ಮುಗಿದ ಬಳಿಕ ಚೈತ್ರಾಳನ್ನು ಆತನ (ನವರಾಜ್) ಮನೆಯಾದ ಚಿಕ್ಕಮಗಳೂರು ಜಿಲ್ಲೆಯ ಲಕ್ಯ ಹೋಬಳಿ, ಸಿಂಧಿಗೆರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಚೈತ್ರಾಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ. ಇತರರಾದ ಜಯಣ್ಣ ಎಸ್.ಡಿ., ಸುಂದರಮ್ಮ, ಅಮೃತಾ, ಪವಿತ್ರಾ ಅವರೊಂದಿಗೆ ಸೇರಿ ಆಕೆಗೆ ನೆರೆಕೆರೆಯವರೊಂದಿಗೆ ಮಾತನಾಡದಂತೆ ನಿರ್ಬಂಧಿಸಿ ಮನೆಯೊಳಗೆ ಕೂಡಿ ಹಾಕಿದ್ದ. ಅವರೆಲ್ಲರೂ ಸೇರಿ 2 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ ನಡೆಸಿ ಹಿಂಸೆ ನೀಡಿದ್ದಾರೆ. ನಂದಿನಿಯನ್ನು ಮದುವೆಯಾದ ಬಗ್ಗೆ ಯಾರಿಗಾದರೂ ಹೇಳಿದಲ್ಲಿಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪತಿಯ ಸ್ನೇಹಿತನಾದ ಕಿರಣ್ಗೆ ನವರಾಜ್ ಮದುವೆಯಾದ ವಿಚಾರ ಗೊತ್ತಿದ್ದರೂ, ಆತ ಸತ್ಯ ಬಚ್ಚಿಟ್ಟು ನಂದಿನಿಯ ಜತೆ ಮದುವೆ ಮಾಡಿಸಿ, ಮದುವೆಗೆ ಸಹಕರಿಸಿ ಮೋಸ ಮಾಡಿದ್ದಾಗಿಯೂ ದೂರು ದಾಖಲಾಗಿದೆ.
ಒಬ್ಬಾಕೆ ಜತೆ ನಿಶ್ಚಿತಾರ್ಥ ಮಾಡಿಕೊಂಡು ಅದನ್ನು ಬಚ್ಚಿಟ್ಟು ಮತ್ತೋರ್ವಳನ್ನು ವಿವಾಹವಾಗಿ ಬಳಿಕ ನಿಶ್ಚಿತಾರ್ಥವಾದ ಯುವತಿಯನ್ನು ಮದುವೆ ಮಾಡಿಕೊಂಡು ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ ಇತರ ಐವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.