ನವದೆಹಲಿ: ಎನ್ ಡಿಎ ಮೈತ್ರಿಕೂಟದ ನಾಯಕರಾಗಿ ಬಿಜೆಪಿ ಹಿರಿಯ ನಾಯಕ ನರೇಂದ್ರ ಮೋದಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡುತ್ತಿದ್ದಂತೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ನರೇಂದ್ರ ಮೋದಿಯವರ ಜೊತೆ ಹಲವು ಸಂಸದರು ಸಂಪುಟ ಸಚಿವರಾಗಿ ನಾಳೆ ಜೂನ್ 9 ರಂದು ಸಂಜೆ 07.15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಲವಾರು ನೆರೆಯ ರಾಷ್ಟ್ರಗಳ ಮುಖ್ಯಸ್ಥರು ಸೇರಿ ಸಾವಿರಾರು ಮಂದಿ ಗಣ್ಯರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾಗವಹಿಸಲಿದ್ದು, ಮಾಲ್ಡೀವ್ಸ್ ಸರ್ಕಾರದ ಹಲವಾರು ಹಿರಿಯ ಅಧಿಕಾರಿಗಳೊಂದಿಗೆ ಸಮಾರಂಭಕ್ಕಾಗಿ ಮುಯಿಝು ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಷಸ್ ಮತ್ತು ಸೀಶೆಲ್ಸ್ ಸರ್ಕಾರಗಳ ಮುಖ್ಯಸ್ಥರು ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟ ನೆರೆಹೊರೆಯ ದೇಶಗಳಲ್ಲಿ ಪ್ರಮುಖರಾಗಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮತ್ತು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ತಮ್ಮ ಉಪಸ್ಥಿತಿಯನ್ನು ಖಚಿತಪಡಿಸಿದ್ದಾರೆ.
ದಹಲ್ ಮತ್ತು ರನಿಲ್ ವಿಕ್ರಮಸಿಂಘೆ ನಾಳೆ ದೆಹಲಿಗೆ ಆಗಮಿಸಲಿದ್ದಾರೆ. ಪಿಎಂ ಹಸೀನಾ ಇಂದು ದೆಹಲಿಗೆ ಆಗಮಿಸುವ ಸಾಧ್ಯತೆಯಿದೆ.ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 293 ಸ್ಥಾನಗಳೊಂದಿಗೆ ಜಯಗಳಿಸಿತು. ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಗೆದ್ದಿದೆ.
ಭದ್ರತಾ ವ್ಯವಸ್ಥೆಗಳ ಕುರಿತು ಚರ್ಚಿಸಲು ಹಲವು ಭದ್ರತಾ ಸಭೆಗಳನ್ನು ನಡೆಸಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿರುವಂತೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಸೆಶೆಲ್ಸ್ ಉಪಾಧ್ಯಕ್ಷ ಅಹ್ಮದ್ ಅಫೀಫ್, ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೈಲ್ ವಾಂಗ್ಚುಕ್ ಮತ್ತು ಮಾರಿಷಸ್ ರಾಷ್ಟ್ರದ ಮುಖ್ಯಸ್ಥರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದಾರೆ. ಇವರು ಉಳಿದುಕೊಳ್ಳಲು ದೆಹಲಿಯ ತಾಜ್ ಪ್ಯಾಲೇಸ್, ದಿ ಒಬೆರಾಯ್, ದಿ ಲೀಲಾ ಪ್ಯಾಲೇಸ್ ಮತ್ತು ಐಟಿಸಿ ಮೌರ್ಯ ಬುಕ್ಕಿಂಗ್ ಆಗಿವೆ ಎಂದು ಮೂಲಗಳು ತಿಳಿಸಿವೆ.