ಪುತ್ತೂರು: ಧರ್ಮ ಜಾಗೃತಿಯ ಕೆಲಸಗಳನ್ನು ಪುತ್ತಿಲ
ಪರಿವಾರ ಸೇವಾ ಟ್ರಸ್ಟ್ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ಶ್ರೀನಿವಾಸ
ಕಲ್ಯಾಣೋತ್ಸವ (Shrinivas Kalyanotsava) ನಡೆಸಬೇಕೆಂಬ ಭಕ್ತರ ಅಪೇಕ್ಷೆಯಂತೆ ಡಿ.28, 29ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ.
ಇದರ ಪೂರ್ವ ಭಾವಿಯಾಗಿ ಡಿ.15ರಂದು ರಥದ ಕೊಟ್ಟಿಗೆ ಸಮೀಪದಲ್ಲಿ ಸೇವಾ ಕೌಂಟರ್ ಹಾಗೂ ಭೂಮಿ ಪೂಜೆ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಧಾರ್ಮಿಕ ಕಾರ್ಯಕ್ರಮ, ಶೈಕ್ಷಣಿಕ ಸಹಕಾರ, ಕ್ರೀಡಾ ಸಾಧಕರಿಗೆ ಸಹಾಯ, ವೈದ್ಯಕೀಯ ಶಿಬಿರ ಸೇರಿ ಸಾಮಾಜಿಕ ಚಟುವಟಿಕೆಯಲ್ಲಿ ಸೇವಾ ಟ್ರಸ್ಟ್ ಒಂದು ವರ್ಷದಿಂದ ತೊಡಗಿಸಿಕೊಂಡಿದೆ. ಅಸಹಾಯಕರಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ಸೇರಿ ವಿವಿಧ ಸಾಮಾಜಿಕ ಕಾರ್ಯಗಳನ್ನು 20 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಮಾಡಲಾಗಿದೆ. ಧಾರ್ಮಿಕ ಶ್ರದ್ಧೆಯನ್ನು ಅಧಃ ಪತನಕ್ಕೆ ತೆಗೆದುಕೊಂಡು ಹೋಗುವ ಕೆಲಸದ ಜತೆಗೆ ಹಿಂದು ವಿರೋಧಿ ದೋರಣೆಯಲ್ಲಿ ಸರ್ಕಾರಿ ಪ್ರಾಯೋಜಿತವಾಗಿ ಹಲವು ಕಾರ್ಯ ನಡೆಯುತ್ತಿದೆ. ಇದು ಹಿಂದೂ ಸಮಾಜಕ್ಕೆ ದೊಡ್ಡ ದುರಂತವಾಗಿದ್ದು, ಸಮಾಜ ಸಂಘಟಿತವಾಗಿರುವ ಸಂದೇಶ ನೀಡುವ ಕೆಲಸವಾಗಬೇಕಾಗಿದೆ. ಹಿಂದೂ ಸಮಾಜ ಕಲ್ಯಾಣ ಆಗಬೇಕು ಎಂಬ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀನಿವಾಸನ ದರ್ಶನವನ್ನು ಮಾಡುವ ನಿಟ್ಟಿನಲ್ಲಿ ಪುತ್ತೂರಿನ ಬೂತ್ ಮಟ್ಟದಲ್ಲಿ ಪ್ರತಿ ಮನೆಯನ್ನು ಸಂಪರ್ಕ ಮಾಡಿ ಆಮಂತ್ರಣ ನೀಡುವ ಕಾರ್ಯ ಭರದಿಂದ ನಡೆಯುತ್ತಿದೆ. ಕಡಬ, ಸುಳ್ಯ ಸೇರಿ ವಿವಿಧ ತಾಲೂಕುಗಳಲ್ಲಿಯೂ ಸಮಿತಿಯವರು ಆಮಂತ್ರಣ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಸುಮಾರು 75ಸಾವಿರ ಮಂದಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆಯನ್ನು ಮಾಡಿದ್ದು, 25ಸಾವಿರ ಲಡ್ಡು ಪ್ರಸಾದಕ್ಕೆ ಸಿದ್ಧತೆ ಮಾಡಲಾಗಿದೆ. ಡಿ.20ರ ಮೊದಲು ಗ್ರಾಮಗಳಿಂದ ಸೇವಾ ರಶೀದಿಗಳನ್ನು ತರಿಸಿಕೊಂಡು ಯಾವುದೇ ಕೊರತೆಯಿಲ್ಲದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.