ದೆಹಲಿ: ವಿಮಾನದಲ್ಲಿ ಶಬರಿಮಲೆಗೆ ಬರುವ ಅಯ್ಯಪ್ಪಭಕ್ತರಿಗೊಂದು ಸಂತಸದ ಸುದ್ದಿ ಬಂದಿದೆ. ಇನ್ನು ವಿಮಾನದಲ್ಲಿ ತೆಂಗಿನಕಾಯಿ ಹೊಂದಿದ ಇರುಮುಡಿಕಟ್ಟು ಸಹಿತ ಪ್ರಯಾಣಿಸಬಹುದಾಗಿದೆ. ಭಾರತೀಯ ವೋಮಯಾನ ಸಚಿವಾಲಯದಡಿ ಇರುವ ಸಿವಿಲ್ ಎವಿಯೇಷನ್ ಸೆಕ್ಯೂರಿಟಿ ವಿಭಾಗ ಶಬರಿಮಲೆಯ ಭಕ್ತರಿಗೆಂದೇ ಪ್ರತ್ಯೇಕ ಆದೇಶ ಪ್ರಕಟಿಸಿ ಈ ಸೌಲಭ್ಯ ಒದಗಿಸಿದೆ.
ದೇಶದಲ್ಲಿ ಎಲ್ಲಿಗೂ ಪ್ರಯಾಣಿಸುವಾಗ ಈ ಹಿಂದೆ ವಿಮಾನದಲ್ಲಿ ತೆಂಗಿನಕಾಯಿ ಕೊಂಡೊಯ್ಯುವಂತಿರಲಿಲ್ಲ. ಇಂಟರ್ ನೇಷನಲ್ ಏರ್ ಟ್ರಾನ್ಫೋರ್ಟ್ ಅಸೋಸಿಯೇಷನ್ ನಿರ್ಧಾರದಂತೆ ತೆಂಗಿನಕಾಯಿ ಅಪಾಯಕಾರಿ ವಸ್ತುಗಳ ಪಟ್ಟಿಯಲ್ಲಿತ್ತು. ಪ್ರಸ್ತುತ ಶಬರಿಮಲೆಯ ರೀತಿರಿವಾಜು ಗಮನಿಸಿ, ಇರುಮುಡಿ ಕಟ್ಟುಹೊಂದಿ ಬರುವ ವ್ರತಾಧಾರಿ ಭಕ್ತರಿಗೆಂದೇ ಕಾನೂನು ಸಡಿಲಿಕೆ ಮಾಡಲಾಗಿದೆ. ಜನವರಿ 20ರ ತನಕ ಮಾತ್ರವೇ ವಿಮಾನದಲ್ಲಿ ಈ ಸೌಲಭ್ಯ ಸಿಗಲಿದೆ.
ಶಬರಿಮಲೆ ಅಯ್ಯಪ್ಪ ಭಕ್ತರು ತೆಂಗಿನಕಾಯಿ ಕೊಂಡೊಯ್ಯವಂತಿಲ್ಲ ಎಂಬ ಕಾರಣದಿಂದ ಈ ಹಿಂದೆ ವಿಮಾನಯಾನದಿಂದ ವಂಚಿತರಾಗಿದ್ದರು. ಇದೀಗ ಕಾನೂನು ಸಡಿಲಿಕೆ ಮಾಡಿ ಅಯ್ಯಪ್ಪ ಭಕ್ತರಿಗೆ ಸೌಲಭ್ಯ ನೀಡಿರುವುದರಿಂದ ಹೊರರಾಜ್ಯ ಮತ್ತು ವಿದೇಶಗಳಿಂದ ಬರುವವರಿಗೆ ಅನುಕೂಲವಾಗಿದೆ.