ಕಡಬ : ವಾರದ ಹಿಂದೆ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಯುವಕನ ಮೃತದೇಹ ಡಿ 2 ರಂದು ಸಂಜೆ ನೆಟ್ಟಣ ರೈಲು ನಿಲ್ದಾಣದಿಂದ ಒಂದೂವರೆ ಕಿಮೀ ದೂರದ ನಾರಡ್ಕ ಬಳಿ ದಟ್ಟ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಚಿತ ಯುವಕನೇ ಆತನನ್ನು ಹತ್ಯೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಕಾಡಿನ ಮಧ್ಯೆ ಸುಟ್ಟು ಹಾಕಿರುವುದಾಗಿ ತಿಳಿದು ಬಂದಿದೆ
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೊಲೆಯಾದ ಯುವಕ. ಕಡಬ ತಾಲೂಕಿನ ನೆಟ್ಟಣ ಚೆಂಡೆಹಿತ್ತಿಲು ನಿವಾಸಿ ಕುಶಾಲಪ್ಪ ಎಂಬವರ ಪುತ್ರ ಪ್ರತಿಕ್ ಎಂಬಾತನನ್ನು ಕೊಲೆ ಆರೋಪದಲ್ಲಿ ಪೊಲೀಸರು ಭಾನುವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಮೂಲಗಳ ಪ್ರಕಾರ ಪೊಲೀಸ್ ವಿಚಾರಣೆ ವೇಳೆ ಆತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಹತ್ಯೆ ನಡೆಸಿದ ಬಳಿಕ ಮೃತದೇಹವನ್ನು ಕಾಡಿನಲ್ಲಿ ಪೆಟ್ರೋಲ್ ಸುರಿದು ಸುಟ್ಟಿರುವುದಾಗಿ ಬಾಯ್ದಿಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೇ ಕಾಡಿನಲ್ಲಿ ಮರವೊಂದರ ಕೆಳಗಡೆ ಶವವನ್ನು ಬೀಸಾಡಿರುವುದನ್ನು ಪ್ರತಿಕ್ ವಿಚಾರಣೆ ಸಂದರ್ಭ ತಿಳಿಸಿದ್ದಾನೆ. ಹೀಗಾಗಿ ಪೊಲೀಸರು ಶವವನ್ನು ಪತ್ತೆ ಹಚ್ಚುವ ವೇಳೆ ಅತನನ್ನು ಕರೆದುಕೊಂಡು ಬಂದಿದ್ದರು ಆತ ತಿಳಿಸಿದ ಸ್ಥಳದಲ್ಲೆ ಸಂದೀಪ್ ಶವ ದೊರೆತಿದೆ.