ಬಂಟ್ವಾಳ: ಸಾಲೆತ್ತೂರು – ಮುಡಿಪು ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ತೀವ್ರ ತೊಡಕಾಗಿದೆ. ರಸ್ತೆ ಸರಿಪಡಿಸಲು ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಮನವಿಗೂ ಸ್ಪಂದನೆ ನೀಡದೇ ಹೋದರೆ, ಮುಂದಿನ ದಿನದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುವುದು.
ಅಹಿಂಸಾ ನ್ಯಾಯಪರ ಶ್ರಮಿಕ ಸಂಘದ ಪದಾಧಿಕಾರಿಗಳು ಸಾಲೆತ್ತೂರು ಗ್ರಾಮ ಪಂಚಾಯತ್ ಆಡಳಿತಕ್ಕೆ ಮನವಿ ನೀಡಿ, ತಮ್ಮ ಆಗ್ರಹವನ್ನು ಹೀಗೆ ವ್ಯಕ್ತಪಡಿಸಿದೆ.
ಮಳೆ ನೀರು ರಸ್ತೆಯಲ್ಲೇ ಹರಿದು, ರಸ್ತೆ ಹೊಂಡ ಗುಂಡಿಗಳಿಂದ ತುಂಬಿದೆ. ವಾಹನ ಸಂಚಾರಕ್ಕೆ ತೊಡಕಾಗಿದೆ. ಕಷ್ಟದ ಸಂದರ್ಭದಲ್ಲೂ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಜನಪ್ರತಿನಿಧಿ, ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂದು ದೂರಲಾಗಿದೆ.
ಸಾಲೆತ್ತೂರು – ಮುಡಿಪು ರಸ್ತೆಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗಾಗಿ ಓಡಾಡುವುದು ಅನಿವಾರ್ಯ. ತೀರಾ ಹದಗೆಟ್ಟ ರಸ್ತೆಯಲ್ಲಿ ಓಡಾಡುವುದರಿಂದ ವಾಹನಗಳಿಗೆ ದೊಡ್ಡ ಮಟ್ಟದ ಹಾನಿಯನ್ನು ಉಂಟಾಗಿದೆ. ಮಾತ್ರವಲ್ಲ, ವಾಹನ ಸವಾರರಿಗೆ, ಪ್ರಯಾಣಿಕರಿಗೂ ತೊಂದರೆ ಎದುರಾಗಿದೆ. ಆದ್ದರಿಂದ ಗ್ರಾಪಂ ನಿರ್ಣಯ ಕೈಗೊಂಡು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಪತ್ರ ಮೂಲಕ ಮನದಟ್ಟು ಮಾಡಿಸಿ ತಕ್ಷಣವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ವಾಹನ ಸವಾರರ, ಪ್ರಯಾಣಿಕರ ಮತ್ತು ಚಾಲಕರ ನೆಮ್ಮದಿಯ ಸುಖಕರ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಮನವಿಯ ಬಳಿಕವೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಹೋರಾಟ ನಡೆಸುವುದು ಅನಿವಾರ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಹಿಂಸಾ ನ್ಯಾಯಪರ ಶ್ರಮಿಕ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ನವಾಜ್ ಕಬಕ ಮನವಿ ನೀಡಿದರು.