ಪುತ್ತೂರು: ತಾಲೂಕಿನಲ್ಲಿ ಸಿಡಿಲಾಘಾತಕ್ಕೆ ಅದೆಷ್ಟು ಮಂದಿ ಜೀವ ತೆತ್ತಿದ್ದಾರೆ. ಇನ್ನಾದರೂ ಮಿಂಚು ನಿರೋಧಕ ಅಳವಡಿಸಿ ಎಂಬ ಧ್ವನಿ ಸಾರ್ವಜನಿಕರಿಂದ ವ್ಯಕ್ತವಾಗುತ್ತಲೇ ಇತ್ತು. ಆದರೆ ಆಡಳಿತ ಕ್ಯಾರೇ ಅನ್ನಲಿಲ್ಲ. ಇದೀಗ ತಾಲೂಕಿನ ಶಕ್ತಿ ಕೇಂದ್ರ ಅಥವಾ ಉಪವಿಭಾಗದ ಕೇಂದ್ರ ಸ್ಥಾನವಾಗಿರುವ ಪುತ್ತೂರು ಆಡಳಿತ ಸೌಧಕ್ಕೆ ಸಿಡಿಲಾಘಾತದ ಬಿಸಿ ತಟ್ಟಿದೆ.
ಸೋಮವಾರ ವಿಧಾನ ಪರಿಷತ್ ಚುನಾವಣೆಯ ರಂಗು. ಇದಕ್ಕೆ ತಯಾರಿ ನಡೆಸುತ್ತಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಇಂಟರ್ನೆಟ್ ಕೈಕೊಟ್ಟಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಸಿಡಿಲಾಘಾತಕ್ಕೆ ಇಂಟರ್ನೆಟ್ ಢಮಾರ್ ಆಗಿರುವುದು ಖಾತ್ರಿಯಾಗಿದೆ.
ಸಿಡಿಲಾಘಾತಕ್ಕೆ ಪುತ್ತೂರಿನ ಶಕ್ತಿ ಕೇಂದ್ರ ನಲುಗಿ ಹೋಗಿದೆ. ತಾಲೂಕು ಕಚೇರಿ, ಉಪನೋಂದಣಿ ಇಲಾಖೆ ಸೇರಿದಂತೆ ತಾಲೂಕು ಆಡಳಿತ ಸೌಧದಲ್ಲಿರುವ ಎಲ್ಲಾ ಕಚೇರಿಗಳ ಸರ್ವರ್ ಕೆಟ್ಟು ಹೋಗಿದೆ. ಆದ್ದರಿಂದ ಸೋಮವಾರ ಇಲಾಖೆಗಳ ಸಿಬ್ಬಂದಿಗಳಿಗೆ ಕೆಲಸವಿಲ್ಲದಂತಹ ಪರಿಸ್ಥಿತಿ. ಇನ್ನು ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಆಗಮಿಸಿದ ಪ್ರಜೆಗಳು ಹಿಡಿಶಾಪ ಹಾಕುತ್ತಾ ಬರಿಗೈಲಿ ವಾಪಾಸಾಗುತ್ತಿದ್ದರು.
ಅಷ್ಟಕ್ಕೂ ಆಗಿದ್ದೇನು?
ಶನಿವಾರ ಸಂಜೆ ಅಪ್ಪಳಿಸಿದ ಸಿಡಿಲು ಆಡಳಿತ ಸೌಧಕ್ಕೆ ಬಿಸಿ ತಟ್ಟಿಸಿದೆ. ಖಾಸಾಗಿ ಕಚೇರಿಗಳಲ್ಲೂ ನೆಟ್ ಇದೆಯಲ್ವಾ? ಅಲ್ಲೇನು ಆಗಿಲ್ವೇ ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕರಲ್ಲಿ ಮೂಡಿದೆ. ಪುತ್ತೂರು ಆಡಳಿತ ಸೌಧದಲ್ಲಿ ಮಿಂಚು ನಿರೋಧಕ ಇಲ್ಲವೇ? ಸಂಜೆ ಕಚೇರಿ ಬಾಗಿಲು ಮುಚ್ಚಿ ಹೋಗುವಾಗ, ಇಂಟರ್ನೆಟ್ ಆಫ್ ಮಾಡುವುದಿಲ್ಲವೇ? ಹೀಗೆಲ್ಲಾ ಸಾರ್ವಜನಿಕರಿಂದ ಪ್ರಶ್ನೆಗಳು ಕೇಳಿಬರುತ್ತಿವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಉತ್ತರಿಸಬೇಕಿದೆ.
ಚುನಾವಣಾ ಕಾರ್ಯಕ್ಕೆ ಪರದಾಡಿದ ಸಿಬ್ಬಂದಿ:
ಸೋಮವಾರ ವಿಧಾನ ಪರಿಷತ್ ಚುನಾವಣೆ. ಹಾಗಾಗಿ ಭಾನುವಾರ ಬೆಳಿಗ್ಗೆ ಚುನಾವಣಾ ತಯಾರಿಗಾಗಿ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ ಕೆಲಸಕ್ಕೆ ಮುಂದಾಗಿದ್ದಾರೆ. ಆಗ ಇಂಟರ್ನೆಟ್ ಇಲ್ಲದೇ ಇರುವುದು, ಸಿಡಿಲಿನ ಎಫೆಕ್ಟ್ ಬೆಳಕಿಗೆ ಬಂದಿದೆ. ಆದರೇನು ಮಾಡುವುದು – ಭಾನುವಾರ. ಹಾಗಾಗಿ ಮೊಬೈಲ್ ಹಾಟ್ ಸ್ಪಾಟ್ ಕನೆಕ್ಟ್ ಮಾಡಿಕೊಂಡು, ಕಷ್ಟಪಟ್ಟು ಕೆಲಸ ನಿರ್ವಹಿಸಲಾಗಿದೆ ಎನ್ನುತ್ತಾರೆ ಸಿಬ್ಬಂದಿಗಳು.
ಸರಿಯಾಗಲು ಎಷ್ಟು ದಿನ ಬೇಕು?
ಸರ್ವರ್ ಸಮಸ್ಯೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸೋಮವಾರ ಕೆಟ್ಟು ಹೋದ ಪರಿಕರಗಳನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದೆ. ಅಗತ್ಯ ಎನಿಸುವ ಕೆಲ ಇಲಾಖೆಯ ಪರಿಕರಗಳನ್ನು ಸೋಮವಾರ ಸಂಜೆಗೆ ಸ್ವಲ್ಪ ಮಟ್ಟಿಗೆ ಸರಿಪಡಿಸಲಾಗಿದೆ ಎಂದು ಹೇಳಲಾಗಿದೆ. ಅದು ಎಷ್ಟರಮಟ್ಟಿಗೆ ಸರಿಯಾಗಿದೆ ಎಂದು ಮಂಗಳವಾರ ಬೆಳಿಗ್ಗೆ ತಿಳಿಯಲಿದೆ. ಉಪನೋಂದಣಿ ಇಲಾಖೆಯ ಸರ್ವರ್ ಇನ್ನು ಸರಿಯಾಗಿಲ್ಲ ಎಂದು ತಿಳಿದುಬಂದಿದೆ. ಅದಕ್ಕೆ ಎಷ್ಟು ದಿನ ತಗಲಬಹುದೋ ತಿಳಿದುಬಂದಿಲ್ಲ.