ಪುತ್ತೂರು: ಮುಖ್ಯರಸ್ತೆಯಲ್ಲಿ ಎರಡು ಹೊಂಡಗಳು ಬಾಯ್ದೆರೆದು ಕೂತಿವೆ. ಅಂತಿಂಥ ಹೊಂಡಗಳಲ್ಲ ಅವು. ಇಡೀಯ ಜೀವವನ್ನು ಒಮ್ಮೆಗೆ ಮುಕ್ಕಳಿಸಿ ಬಿಡುವ ಹೊಂಡಗಳವು.
ಅರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಇದೇ ಹೊಂಡಕ್ಕೆ ಬಿದ್ದು – ಎದ್ದು ಹೋಗುತ್ತಿದ್ದಾರೆ.
ಒಂದು ಹೊಂಡ ದರ್ಬೆ ವೃತ್ತದ ಬಳಿಯೇ ಇದೆ. ಇನ್ನೊಂದು, ಹರ್ಷ ಮಳಿಗೆಯ ಮುಂದಿದೆ. ಈ ಹೊಂಡಗಳನ್ನು ಭರ್ತಿ ಮಾಡಿದಷ್ಟೂ ಮತ್ತೆ ಮತ್ತೆ ಬಾಯ್ದೆರೆದು ಕುಳಿತುಕೊಳ್ಳುತ್ತವೆ. ಕಾರಣ, ಆ ದೇವರೇ ಬಲ್ಲ.
ಪುತ್ತೂರು ಪೇಟೆಯಲ್ಲಿ ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ನಗರೋತ್ಥಾನದಡಿ ಮತ್ತೊಮ್ಮೆ ಡಾಮರು ಹಾಕಿ ಹಾಳುಗೆಡವಲಾಗಿದೆ. ಅದ್ಹೇಗೋ ಸಾಧಾರಣ ಸುಸ್ಥಿತಿಯಲ್ಲಿದ್ದ ರಸ್ತೆಗಳು, ಇದೀಗ ಕುಲಗೆಟ್ಟು ಹೋಗಿವೆ. ಅಲ್ಲಿ ಬಿದ್ದಿರುವ, ಇತರ ಕಡೆಗಳಲ್ಲಿ ಎದ್ದಿರುವ ರಸ್ತೆಯ ಹೊಂಡಗಳಿಗೆ ಈ ಎರಡು ಹೊಂಡಗಳು ಹಿರಿಯಣ್ಣನಂತಿವೆ.
ಜನಪ್ರತಿನಿಧಿಗಳು, ಅಧಿಕಾರಿಗಳೇ – ಜನಸಾಮಾನ್ಯರು ಮನವಿ ನೀಡುವವರೆಗೆ ಅಥವಾ ಹಿಡಿಶಾಪ ಹಾಕುವವರೆಗೆ ಕಾಯುವ ಅವಶ್ಯಕತೆ ಇದೆಯೇ? ಆದಷ್ಟು ಶೀಘ್ರ ರಸ್ತೆಯ ಹೊಂಡಗಳಿಗೆ ಮುಕ್ತಿ ನೀಡಬಹುದಲ್ಲವೇ? ವೃಥಾ ಅನೇಕ ಜೀವಗಳು ನೋವುಣ್ಣುವ ಬದಲು ಅಥವಾ ಪ್ರಾಣ ಹಾನಿ ಸಂಭವಿಸುವ ಮೊದಲು ಎಚ್ಚೆತ್ತುಕೊಂಡರೆ ಒಳಿತಲ್ಲವೇ?