ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಂಗಳವಾರ ಫಲಿತಾಂಶ ಪ್ರಕಟಿಸಿದ್ದು, 35.25% ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಎಪ್ರಿಲ್ 29 ರಿಂದ ಮೇ 16ರವರೆಗೆ ಪರೀಕ್ಷೆಗಳು ನಡೆದಿತ್ತು. ಪರೀಕ್ಷೆಗೆ ಒಟ್ಟು 1,48,942 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 52,505 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕರು 26,496 (31.31%) ಹಾಗೂ 26009 (40.44%) ಬಾಲಕಿಯರು ಪಾಸ್ ಆಗಿದ್ದಾರೆ.
ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ 11589 (22.24%) ವಾಣಿಜ್ಯ ವಿಭಾಗದಲ್ಲಿ 8709 (22.06%) ಮತ್ತು ವಿಜ್ಞಾನ ವಿಭಾಗದಲ್ಲಿ 32207 (56.16%) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪರೀಕ್ಷೆ-2 ಬರೆದ ವಿದ್ಯಾರ್ಥಿಗಳಲ್ಲಿ ಫಲಿತಾಂಶ ಸುಧಾರಣೆ ಬಯಸಿದ 32940 ವಿದ್ಯಾರ್ಥಿಗಳು ಸೇರಿದ್ದಾರೆ.
ಪರೀಕ್ಷೆ-2 ರ ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಕೆಗೆ ಮೇ 23 ಕೊನೆ ದಿನವಾಗಿದ್ದು, ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಕೆಗೆ ಮೇ 25 ಕೊನೆ ದಿನಾಂಕವಾಗಿದೆ.
ಇದೇ ವೇಳೆ ಪರೀಕ್ಷೆ-3 ವೇಳಾಪಟ್ಟಿಯನ್ನೂ ಮಂಡಳಿ ಪ್ರಕಟಿಸಿದೆ. ಪರೀಕ್ಷೆ-3ಕ್ಕೆ ಪರೀಕ್ಷಾ ಶುಲ್ಕ ಪಾವತಿಗೆ ದಂಡ ರಹಿತವಾಗಿ ಮೇ 23 ರಿಂದ 28ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ದಂಡ ಸಹಿತವಾಗಿ ಮೇ 29 ರಿಂದ ಮೇ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜೂನ್ 26 ರಿಂದ ಜುಲೈ 5ರವರೆಗೆ ಪರೀಕ್ಷೆ-3 ನಡೆಯಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ 5,52,690 ವಿದ್ಯಾರ್ಥಿಗಳು ಪಾಸ್ ಆಗಿ 81.15% ಫಲಿತಾಂಶ ದಾಖಲಾಗಿತ್ತು.