ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದ 2024 ನೇ ಸಾಲಿನ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಲೆಕ್ಕಪತ್ರ ಮಂಡನೆಯು ಮಾ.10 ರಂದು ಪೆರುವಾಜೆ ದೇವಾಲಯದ ವಠಾರದಲ್ಲಿ ನಡೆಯಿತು.
ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಲೆಕ್ಕಪತ್ರ ಮಂಡಿಸಿ 91.30 ಲಕ್ಷ ರೂ.ಜಮೆ ಆಗಿದ್ದು ಖರ್ಚು ವೆಚ್ಚದ ವಿವರ, ಉಳಿತಾಯ ಮೊತ್ತ, ಶ್ರೀಕ್ಷೇತ್ರದ ದೈವ ದೇವರುಗಳಿಗೆ ಆಭರಣ ಸಮರ್ಪಣೆಯ ವಿವರವನ್ನು ಅಂಕಿ ಅಂಶಗಳೊಂದಿಗೆ ಸಭೆಯ ಮುಂದಿಟ್ಟರು.
ಇದನ್ನು ಓದಿ: ಗೋಬಿಯಲ್ಲೂ ಪತ್ತೆಯಾಯ್ತು ಅಪಾಯಕಾರಿ ರಾಸಾಯನಿಕ!
ಜಮಾ-ಖರ್ಚು ಮಂಡನೆ
ಶ್ರೀ ಕ್ಷೇತ್ರಕ್ಕೆ ಸಹಾಯಧನದ ರೂಪದಲ್ಲಿ 78.64 ಲಕ್ಷ ರೂ., ಹುಂಡಿ ಹರಿವಾಣ ಕಾಣಿಕೆ ಮೂಲಕ 2.80 ಲಕ್ಷ ರೂ., ಉಳಿಕೆ ಮರದ ಹರಾಜಿನಿಂದ 3.11 ಲಕ್ಷ ರೂ. ಸೇರಿದಂತೆ ಒಟ್ಟು 91,30,028.00 ರೂ. ಜಮೆ ಆಗಿದೆ. ರಥದ ಕೆಲಸಕ್ಕೆ 27.70 ಲಕ್ಷ ರೂ.,ರಥದ ಶೆಡ್ ನಿರ್ಮಾಣಕ್ಕೆ 11.91 ಲಕ್ಷ ರೂ. ಸೇರಿದಂತೆ ಜಾತ್ರೆ ಹಾಗೂ ಬ್ರಹ್ಮರಥೋತ್ಸವಕ್ಕೆ ವಿವಿಧ ವಿಭಾಗದಲ್ಲಿ ಖರ್ಚಾದ ಮೊತ್ತ, ಉಳಿತಾಯದ ರೂಪದಲ್ಲಿ ಬ್ಯಾಂಕ್ ನಲ್ಲಿ 81,986 ರೂ., ನಗದು ರೂಪದಲ್ಲಿ 28,522 ರೂ. ಮೊತ್ತ ಲಭ್ಯತೆಯ ಲೆಕ್ಕವನ್ನು ಮಂಡಿಸಲಾಯಿತು.
17.98 ಲಕ್ಷ ರೂ.ಮೊತ್ತದ ಆಭರಣ ಸಮರ್ಪಣೆ
ಜಮೆಯಾದ 91.30 ಲಕ್ಷ ರೂ.ಮೊತ್ತದಲ್ಲಿ ರಥ ನಿರ್ಮಾಣಕ್ಕೆ ಹಾಗೂ ಜಾತ್ರೆಯ ಖರ್ಚು ಭರಿಸಿ ಉಳಿದ ಮೊತ್ತದಲ್ಲಿ 17.98 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಶ್ರೀ ಕ್ಷೇತ್ರದ ದೈವ ದೇವರುಗಳಿಗೆ ಸಮರ್ಪಿಸಲಾಗಿದೆ. ಕಲ್ಲುರ್ಟಿ ದೈವಕ್ಕೆ ಚಿನ್ನದ ಹೂವು, ದೈವ ನರ್ತಕನಿಗೆ ಚಿನ್ನದ ಉಂಗುರ 14,049 ರೂ., ಉತ್ಸವ ಮೂರ್ತಿಗೆ ಚಿನ್ನದ ಕವಚ 7.57 ಲಕ್ಷ ರೂ., ಕಲ್ಕುಡ ದೈವಕ್ಕೆ ಬೆಳ್ಳಿಯ ತಲೆಪಟ್ಟಿ 87,612 ರೂ., ಪ್ರಭಾವಳಿಯ ಸತ್ತಿಗೆಗೆ ಚಿನ್ನ 5.40 ಲಕ್ಷ ರೂ., ಪಲ್ಲಕ್ಕಿಗೆ ಬೆಳ್ಳಿ 2.98 ಲಕ್ಷ ರೂ., ದೈವದ ಬೆಳ್ಳಿ 66,507 ರೂ.ಮೊತ್ತ ಸೇರಿದಂತೆ 17.98 ಲಕ್ಷ ರೂ. ವೆಚ್ಚವಾಗಿದೆ. ಉಳಿದಂತೆ 43 ಸಾವಿರ ರೂ. ವೆಚ್ಚದಲ್ಲಿ ರಂಗಪೂಜೆಯ ಸ್ಟ್ಯಾಂಡ್, 2.75 ಲಕ್ಷ ರೂ.ವೆಚ್ಚದಲ್ಲಿ ಇಂಟರ್ ಲಾಕ್ ಅಳವಡಿಕೆ, 66 ಸಾವಿರ ರೂ. ವೆಚ್ಚದಲ್ಲಿ ವಿದ್ಯುತ್ ಉಪಕರಣ ಸೇರಿದಂತೆ ವಿವಿಧ ಪರಿಕರಗಳ ಖರೀದಿಸಲಾಗಿದೆ ಎಂದು ಪದ್ಮನಾಭ ಶೆಟ್ಟಿ ಹೇಳಿದರು.
ಅಪೂರ್ವ ಕಾರ್ಯಕ್ರಮ
ಕ್ಷೇತ್ರದಲ್ಲಿ ನೂರು ವರ್ಷದ ಬಳಿಕ ನಡೆದ ಬ್ರಹ್ಮರಥೋತ್ಸವವು ಐತಿಹಾಸಿಕ ದಾಖಲೆ ಬರೆದಿದ್ದು ಇದಕ್ಕೆ ಮೂಲ ಕಾರಣ ಭಕ್ರವೃಂದದ ಸಹಕಾರ. ಶ್ರೀ ಜಲದುರ್ಗಾದೇವಿಯ ಇಚ್ಛೆಯಂತೆ ಯಾರ ಕೈಯಲ್ಲಿ ಯಾವ ಕೆಲಸ ಮಾಡಬೇಕಿತ್ತೊ ಅದನ್ನು ಆ ಮಹಾತಾಯಿ ಮಾಡಿಸಿದ್ದಾಳೆ. ಪೆರುವಾಜೆ ರಥೋತ್ಸವ ಹತ್ತೂರಿನ ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತೆ ನಡೆದಿದೆ. ಇಂತಹ ಅಪೂರ್ವ ಕ್ಷಣದಲ್ಲಿ ನಾವೆಲ್ಲರೂ ಭಾಗಿಯಾಗಿರುವುದಕ್ಕೆ ಜಲದುರ್ಗಾದೇವಿಯೇ ಕಾರಣ ಎಂದು ಪದ್ಮನಾಭ ಶೆಟ್ಟಿ ಹೇಳಿದರು.
ದಾನ ರೂಪದಲ್ಲಿ ಬಂತು
50 ಲಕ್ಷ ರೂ.ಮೊತ್ತದ ಮರ..!
ಆರು ತಿಂಗಳ ಹಿಂದೆ ರಥ ನಿರ್ಮಾಣದ ಬಗ್ಗೆ ಚಿಂತನೆ ನಡೆಯಿತು. 1 ಕೋ. ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿತ್ತು. ಇಷ್ಟೊಂದು ಮೊತ್ತದ ಕೆಲಸ ಕಾರ್ಯ ಆರಂಭಕ್ಕೆ ಸಣ್ಣ ಅಳಕು ಇತ್ತು. ಆದರೆ ದೇವಿಯ ಇಚ್ಛೆ ಬೇರೆಯೇ ಇತ್ತು. ಎಲ್ಲವೂ ಪವಾಡದಂತೆ ನಡೆದು ಹೋಯಿತು. ಸುಮಾರು 50 ಲಕ್ಷ ರೂ. ಮೊತ್ತದ ಮರವನ್ನು ಭಕ್ತರು ದಾನ ರೂಪದಲ್ಲಿ ಕ್ಷೇತ್ರಕ್ಕೆ ಸರ್ಮಪಿಸಿದರು. ಹೀಗಾಗಿ ರಥ ನಿರ್ಮಾಣದ ಅರ್ಧ ಖರ್ಚು ದಾನ ರೂಪದಲ್ಲಿಯೇ ಭರ್ತಿಯಾಯಿತು. ಉಳಿದ ಮೊತ್ತ ದೇಣಿಗೆ ರೂಪದಲ್ಲಿ ಹರಿದು ಬಂತು. ವ್ಯವಸ್ಥಾಪನ ಸಮಿತಿ ಅವಧಿ ಮುಕ್ತಾಯವಾದರೂ ಜಾತ್ರೆ, ಬ್ರಹ್ಮರಥೋತ್ಸವವು ಸಮಿತಿಯ ಮೂಲಕವೇ ನೆರವೇರಿತು. ಹೀಗಾಗಿ ಸಣ್ಣ ಅವಧಿಯಲ್ಲಿ ಬಹುದೊಡ್ಡ ಕಾರ್ಯ ನಡೆದಿದೆ. ಇದರ ಹಿಂದೆ ಸ್ಥಾನಮಾನದ ಫಲಾಫೇಕ್ಷೆ ಇಲ್ಲದೆ ದುಡಿದ ಸಾವಿರಾರು ಕಾರ್ಯಕರ್ತರ ಕರ ಸೇವೆಯು ಸೇರಿದೆ. ಅವರಿಗೆ ಶ್ರೀ ದೇವಿಯು ಎಲ್ಲ ಫಲವನ್ನು ಕರುಣಿಸಲಿ ಎಂದು ಪದ್ಮನಾಭ ಶೆಟ್ಟಿ ಹೇಳಿದರು.
ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಯಶಸ್ಸಿನ ಹಿಂದೆ ದುಡಿದ ವ್ಯವಸ್ಥಾಪನ ಸಮಿತಿ ಭಕ್ತರು ಅಭಿನಂದಿಸಿದರು.
ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ವೆಂಕಟಕೃಷ್ಣ ರಾವ್, ನಾರಾಯಣ ಕೊಂಡೆಪ್ಪಾಡಿ, ದಾಮೋದರ ನಾಯ್ಕ ಪೆಲತ್ತಡ್ಕ, ಜಯಪ್ರಕಾಶ್ ರೈ ಪೆರುವಾಜೆ, ಜಗನ್ನಾಥ ರೈ ಪೆರುವಾಜೆ, ಪ್ರಮುಖರಾದ ದೇವದಾಸ ಶೆಟ್ಟಿ ಪೆರುವಾಜೆ, ರಾಮ ಯು, ಕುಶಾಲಪ್ಪ ಗೌಡ ಪೆರುವಾಜೆ, ವೇದಿತ್ ರೈ, ಸುಂದರ ನಾಗನಮಜಲು, ಸಚಿನ್ ರಾವ್ ಪೆರುವಾಜೆ, ವಿಜಯ ಪೆರುವಾಜೆ, ವಾಸುದೇವ ಪೆರುವಾಜೆ, ರವಿಚಂದ್ರ, ಜಯಚಂದ್ರ ಪೆರುವಾಜೆ, ಸುರೇಶ್ ಭಟ್ ಉಪ್ಪಂಗಳ, ಪ್ರಕಾಶ್ ಪೆರುವಾಜೆ, ಪ್ರಶಾಂತ್ ಪೆರುವಾಜೆ, ರಜನೀಶ್ ಸವಣೂರು, ರಕ್ಷಿತ್ ಪೆರುವಾಜೆ, ಪವನ್, ವಸಂತ ಆಚಾರ್ಯ ಪೆರುವಾಜೆ, ಚಿದಾನಂದ ಬಜ, ಚೇತನ್, ರಂಜಿತ್, ಯಶೋಧಾ ಬೀರುಸಾಗು ಮೊದಲಾದವರು ಉಪಸ್ಥಿತರಿದ್ದರು.
ರಥ ಸಮರ್ಪಣ ಸಮಿತಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ರೈ ಪನ್ನೆ ನಿರೂಪಿಸಿದರು.