ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿಭಾಗದ ಕಾಡಿನಂಚಿನ ಗ್ರಾಮದಲ್ಲಿ ಸಶಸ್ತ್ರ ನಕ್ಸಲೀಯರು ಪ್ರತ್ಯಕ್ಷರಾಗಿದ್ದಾರೆ. ಇದರಿಂದ ಊರಿನ ಹಾಗೂ ಜಿಲ್ಲೆಯ ಜನ ಆತಂಕಿತರಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದುಷ್ಕೃತ್ಯ ಎಸಗಲು ಇವರು ತಯಾರಿ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಕಾಡಿನಂಚಿನ ಕೂಜಿಮಲೆ ಎಂಬಲ್ಲಿ ನಕ್ಸಲರು ಶನಿವಾರ ಸಂಜೆ ಪ್ರತ್ಯಕ್ಷರಾಗಿದ್ದಾರೆ. ಮಡಿಕೇರಿ ತಾಲೂಕು ಕಾಲೂರು ಗ್ರಾಮದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡ ಮಾವೋವಾದಿಗಳು, ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ 4 ಸಾವಿರ ರೂ.ಗಳಷ್ಟು ಬೆಲೆಯ ದಿನಸಿಯನ್ನು ಖರೀದಿಸಿದರು.
8 ಜನರಿದ್ದ ನಕ್ಸಲೀಯರ ತಂಡದವರು ನಗದು ನೀಡಿ ಸಾಮಗ್ರಿ ಖರೀದಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 6 ವರ್ಷದ ಬಳಿಕ ಮತ್ತೆ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷಗೊಂಡಿದ್ದಾರೆ. 2012ರಲ್ಲಿ ಇದೇ ಕಾಲೂರು ಗ್ರಾಮದಲ್ಲಿ ನಕ್ಸಲೀಯರು ಕಾಣಿಸಿಕೊಂಡಿದ್ದರು. 2018ರ ಫೆಬ್ರವರಿ ತಿಂಗಳಿನಲ್ಲಿ ಇಲ್ಲಿಗೆ ಸಮೀಪದ ಸಂಪಾಜೆ ಗುಡ್ಡೆಗದ್ದೆಯಲ್ಲಿ ಒಂದು ತಂಡ ಕಾಣಿಸಿಕೊಂಡಿತ್ತು.
ಕೊಡಗಿಗೆ ಸೇರಿರುವ ಕೂಜಿಮಲೆಗೆ ಸಮೀಪದಲ್ಲಿ ದಕ್ಷಿಣ ಕನ್ನಡದ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಗ್ರಾಮಗಳಿವೆ. ಇಲ್ಲಿ ಬಹು ವಿಸ್ತಾರವಾದ ಕೂಜಿಮಲೆ ರಬ್ಬರ್ ಎಸ್ಟೇಟ್ ಇದೆ. ಇಲ್ಲಿನ ಕಾಡಿನಲ್ಲಿ ಎರಡು ದಶಕಗಳಿಗೆ ಹಿಂದೆ ಕೆಂಪು ಬಣ್ಣದ ಖನಿಜಗಲ್ಲು ನೆಲದಲ್ಲಿ ಕಾಣಿಸಿಕೊಂಡಿತ್ತು. ಇದನ್ನು ಪಡೆಯಲು ಜನ ನಾಮುಂದು ತಾಮುಂದು ಎಂದು ನುಗ್ಗಿ ಅಕ್ರಮ ಗಣಿಗಾರಿಕೆ ನಡೆಸಿದ್ದರು. ಇಲ್ಲಿನ ಅನೇಕರು ರಾತ್ರೋರಾತ್ರಿ ಶ್ರೀಮಂತರಾಗಿದ್ದರೆ, ಅನೇಕ ಮಂದಿ ಹೇಳಹೆಸರಿಲ್ಲದೆ ನಾಪತ್ತೆಯಾಗಿದ್ದರು.
ಸದ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಕ್ಸಲರು ಆಕ್ಟಿವ್ ಆಗಿದ್ದಾರೆ ಎಂದು ಶಂಕಿಸಲಾಗಿದೆ. ನಿರ್ದಿಷ್ಟ ಪಕ್ಷದ ಕುರಿತ ಕಾರ್ಯಾಚರಣೆ ನಡೆಸಲು ಉದ್ದೇಶಿಸಿರಬಹುದು ಎಂದು ಭಾವಿಸಲಾಗಿದೆ. ಉಭಯ ಜಿಲ್ಲೆಗಳ ಗಡಿಯಲ್ಲಿ ಪೊಲೀಸರು ನಿಗಾ ಇಟ್ಟಿದ್ದಾರೆ. ಇಲ್ಲಿ ಓಡಾಡುವ ಅಪರಿಚಿತ ವಾಹನಗಳ ಮೇಲೂ ನಿಗಾ ಇಡಲಾಗಿದೆ. ಚುನಾವಣಾ ನೀತಿ ಸಂಹಿತೆಯ ಭಾಗವಾಗಿ ಚೆಕ್ಪೋಸ್ಟ್ಗಳನ್ನೂ ಇದೀಗ ನಿರ್ಮಿಸಲಾಗುತ್ತಿದೆ.