ಪುತ್ತೂರು: ವಿಶ್ವ ಹಿಂದೂ ಪರಿಷದ್, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ ಅಂಗವಾಗಿ 14ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಮತ್ತು ಶೋಭಾಯಾತ್ರೆ ಆ. 31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿ ಮುಳಿಯ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷದ್ ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆರಂಭಗೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ ಪುತ್ತೂರಿನಲ್ಲಿ 14ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂದರ್ಭ ಮೊಸರು ಕುಡಿಕೆ, ಶೋಭಾಯಾತ್ರೆ ಉತ್ಸವ, ಮುಕ್ತ ಕಬಡ್ಡಿ ಪಂದ್ಯಾಟ, ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ, ಪುತ್ತೂರು ಮುದ್ದುಕೃಷ್ಣ, ಉದ್ದಕಂಬ, ವೀರ ಹಿಂದು ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.
ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ
ಸಮಿತಿ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಆ. 24ರಂದು ಬೆಳಿಗ್ಗೆ ಗಂಟೆ 10 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಹಾಕಿರುವ ಸಭಾ ಮಂಟಪದಲ್ಲಿ ದಿ| ಟಿ.ರಾಧಾಕೃಷ್ಣ ಭಟ್ ಇವರ ಸ್ಮರಣಾರ್ಥ ಮೂರು ಮಾದರಿಯ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಹೋಟೆಲ್ ಅಶ್ವಿನಿ ಇದರ ಮಾಲಕ ಅಶ್ವಿನ್ ರೈ ಇವರು ಕಬಡ್ಡಿ ಅಂಕಣದ ಉದ್ಘಾಟನೆ ಮಾಡಲಿದ್ದಾರೆ. ನಂತರ 10 ಗಂಟೆಗೆ ಹೈಸ್ಕೂಲ್ ವಿಭಾಗದ ಹುಡುಗರ ಅಹ್ವಾನಿತ 6 ತಂಡಗಳ ಕಬಡ್ಡಿ ಪಂದ್ಯಾಟ, ಮಧ್ಯಾಹ್ನ 1 ರಿಂದ ವಿಶೇಷವಾಗಿ ಕಾರ್ಯಕರ್ತರ 7 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾಧ್ಯಕ್ಷರಾಗಿ ಸುಜೇಂದ್ರ ಪ್ರಭು, ಅಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುನೀತ್ ಅತ್ತಾವರ, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್, ಭರತ್ ಕುಮೇಲು ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ್ ಸಂತೋಷ್ ಕುಮಾರ್ ರೈ ನಳೀಲು, ಆಡಳಿತ ಮೊಕ್ತಸರರು, ನಳೀಲು ಸುಬ್ರಮಣ್ಯ ದೇವಸ್ಥಾನ ನಿತಿನ್ ಕುಮಾರ್ ಮಂಗಳವಿರೂಪಾಕ್ಷ ಭಟ್ ಮಚ್ಚಿಮಲೆ, ವಕೀಲರು ಪುತ್ತೂರು ಕಿರಣ್ ಚಂದ್ರ ಡಿ. ಪುಷ್ಪಗಿರಿ, ಯುವ ಉದ್ಯಮಿಗಳು ಅರುಣ್ ಕುಮಾರ್ ರೈ ಆನಾಜಿ, ಉದ್ಯಮಿಗಳು ಯಶ್ ಕುಮಾರ್ ಮಕಾಡಿಯ, ಉದ್ಯಮಿಗಳು ಧರೇಶ್ ಹೊಳ್ಳ, ಮಾಲಕರು ಹೊಳ್ಳ ಕ್ರಾಕರ್ಸ್ ಶವಿನ್ ಪೂಜಾರಿ, ಯುವ ಉದ್ಯಮಿ ಇವರು ಉಪಸ್ಥಿತರಿರಲಿದ್ದಾರೆ.
ರಾತ್ರಿ 8 ಗಂಟೆಯಿಂದ ಪುರುಷರ ಹೊನಲು ಬೆಳಕಿನ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿರುವುದು. ಪ್ರಥಮ ಬಹುಮಾನ 7000 ರೂ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 5000 ರೂ ಮತ್ತು ಟ್ರೋಫಿ, ತೃತೀಯ ಬಹುಮಾನ 3000 ಮತ್ತು ಟ್ರೋಫಿ ಚತುರ್ಥ ಬಹುಮಾನ 2000 ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಅಟ್ಟಿ ಮಡಿಕೆ ಒಡೆಯುವ ಸಾಹಸ ಸ್ಪರ್ಧೆ
ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಮಾತನಾಡಿ, 31ರಂದು ಮದ್ಯಾಹ್ನ ಗಂಟೆ 02-30ರಿಂದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಮತ್ತು ಹಿಂದೂ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ. ಧ್ವಜ ಹಸ್ತಾಂತರ ಪ್ರದೀಪ್ ಸರಿಪಲ್ಲ, ವಿ.ಹಿಂ.ಪ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಇವರು ನಡೆಸಲಿದ್ದಾರೆ ಎಂದರು.
ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಸುಂದರ ರಥದೊಂದಿಗೆ ಕೊಂಬು ಕಹಳೆಯೊಂದಿಗೆ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆ ಕರ್ನಾಟಕ ರಾಜ್ಯ ಮಟ್ಟದ ತಾಲೀಮು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ವೀರಾಂಜನೇಯ ವ್ಯಾಯಾಮ ಶಾಲೆ ಚಂದಳಿಕೆ ವಿಟ್ಲ ಇವರಿಂದ ಆಕರ್ಷಕ ಮೈನವಿರೇಳಿಸುವ ತಾಲೀಮು ಪ್ರದರ್ಶನ,ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಪ್ರಸಿದ್ದ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಕೀಲುಕುದುರೆ, ಗೊಂಬೆ, ನಾಸಿಕ್ ಬ್ಯಾಂಡ್ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಲಿದ್ದಾರೆ.
ದಿ| ಗುರುಕೃಷ್ಣ ಸುಳ್ಯ ಇವರ ಸ್ಮರಣಾರ್ಥ ವೀರ ಯುವಕರಿಂದ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಸ್ಪರ್ಧೆಯು ಮುಖ್ಯರಸ್ತೆಯ ಮೂಲಕ ಸಾಗಿ ಅಂಚೆ ಕಛೇರಿಯ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ, ಸಂಜೆ ಗಂಟೆ 6-30 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಸಭಾವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಪಷ್ಠಿಪೂರ್ತಿ ಸಂಭ್ರಮದ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣವೇಣಿ ಪ್ರಸಾದ್ ಮುಳಿಯ ಅಧ್ಯಕ್ಷರು, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಇವರು ವಹಿಸಲಿದ್ದಾರೆ. ದಿಕ್ಸೂಚಿ ಭಾಷಣಗಾರರಾಗಿ ಶಿವಾನಂದ ಮೆಂಡನ್, ವಿ.ಹಿಂ.ಪ. ಮಂಗಳೂರು ವಿಭಾಗ ಸಹಕಾರ್ಯದರ್ಶಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ| ಗೋಪಿನಾಥ್ ಪೈ, ಖ್ಯಾತ ಸರ್ಜನ್, ಸಿಟಿ ಆಸ್ಪತ್ರೆ ಪುತ್ತೂರು, ಅಶೋಕ್ ಬ್ರಹ್ಮನಗರ, ಅಧ್ಯಕ್ಷರು ಮಾರಿಯಮ್ಮ ದೇವಸ್ಥಾನ ಬ್ರಹ್ಮನಗರ, ಪುತ್ತೂರು ಇವರು ಭಾಗವಹಿಸಲಿದ್ದಾರೆ ಎಂದರು.
ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯ ಪ್ರಥಮ ಬಹುಮಾನ 10000/- ಮತ್ತು ಟ್ರೋಫಿ, ದ್ವಿತೀಯ ಬಹುಮಾನ 7000/- ಮತ್ತು ಟ್ರೋಫಿ, ತೃತೀಯ ಬಹುಮಾನ 4000/-ಮತ್ತು ಟ್ರೋಫಿ ಇರಲಿದೆ.
ಕೃಷ್ಣ ವೇಷ ಸ್ಪರ್ಧೆ
ಸಮಿತಿ ಉಪಾಧ್ಯಕ್ಷೆ ವಿ. ಪ್ರಭಾವತಿ ಮಾತನಾಡಿ, ಆ. 25ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10-00 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಹಾಕಿರುವ ಸಭಾಮಂಟಪದಲ್ಲಿ ದಿ. ನಿತಿನ್ ಕುಮಾರ್ ನಿಡ್ನಳ್ಳಿ ಇವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. ಡಾ|ಸುಧಾ ಎಸ್ ರಾವ್, ಪ್ರಗತಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಪುತ್ತೂರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಡಾ. ಅನಿಲ ದೀಪಕ್ ಶೆಟ್ಟಿ ಭಾಗವಹಿಸಲಿದ್ದಾರೆ.
2 ವರ್ಷದ ಒಳಗಿನ ಮಕ್ಕಳಿಗೆ ಪುತ್ತೂರು ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದ್ದು ಇದರಲ್ಲಿ ಪ್ರಥಮ ಬಹುಮಾನ ಚಿನ್ನದ ಪದಕ, ದ್ವಿತೀಯ ಬೆಳ್ಳಿಯ ತೃತೀಯ ಕಂಚಿನ ಪದಕ ನೀಡಲಿದ್ದು. 2 ರಿಂದ 4 ವರ್ಷದ ಮಕ್ಕಳಿಗೆ ಕಂದಕೃಷ್ಣ, 4 ರಿಂದ 6 ವರುಷ ಮಕ್ಕಳಿಗೆ ಬಾಲಕೃಷ್ಣ, 6 ರಿಂದ 9 ವರುಷದ ಮಕ್ಕಳಿಗೆ ಕಿಶೋರ ಕೃಷ್ಣ, 9 ರಿಂದ 16 ವರುಷದ ಮಕ್ಕಳಿಗೆ ರಾಧಾ ಕೃಷ್ಣವೇಶ ಸ್ಪರ್ಧೆ ನಡೆಯಲಿದೆ. ಅಲ್ಲದೇ, 16 ವರುಷದ ಒಳಗಿನ ವಯೋಮಿತಿ ಮತ್ತು ವಯಸ್ಮರ ವಿಭಾಗದಲ್ಲಿ ಶಂಖನಾದ ಸ್ಪರ್ಧೆ ನಡೆಯಲಿದೆ. ಕೃಷ್ಣವೇಶ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ನೀಡಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪುತ್ತೂರು ಅಧ್ಯಕ್ಷ ದಾಮೋದರ ಪಾಟಾಳಿ, ಸಮಿತಿ ಕಾರ್ಯದರ್ಶಿ ಜಗದೀಶ್ ನೀರ್ಪಾಜೆ, ಸಹಕಾರ್ಯದರ್ಶಿ ಶರಾವತಿ ರವಿನಾರಾಯಣ ಉಪಸ್ಥಿತರಿದ್ದರು.