Share News

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಜತೆ ಚಿಲ್ಲರೆಗಾಗಿ ಜಗಳ ಮಾಡಬೇಕಿಲ್ಲ! ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಬಹುತೇಕ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಇದೀಗ ವಿಸ್ತರಣೆಯಾಗಿದ್ದು, ಯುಪಿಐ  ಅ್ಯಪ್ ಮೂಲಕವೇ ಟಿಕೆಟ್ ಹಣ ಪಾವತಿ ಮಾಡಬಹುದಾಗಿದೆ. ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಯನ್ನು ನವೆಂಬರ್ 6 ರಂದು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆರಂಭಿಸಲಾಗಿತ್ತು. ಸದ್ಯ ನಿಗಮದ ಎಲ್ಲಾ 8,941 ಬಸ್‌ಗಳಿಗೆ ವಿಸ್ತರಿಸಲಾಗಿದೆ.

ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಆರಂಭದಲ್ಲೇ ಗಣನೀಯ ಯಶಸ್ಸನ್ನು ಸಾಧಿಸಿದೆ. ಸಂಸ್ಥೆಯ ದೈನಂದಿನ ಆದಾಯದ 7 ಕೋಟಿ ರೂ. (ಶಕ್ತಿ ಯೋಜನೆ ಮತ್ತು ವಿದ್ಯಾರ್ಥಿ ಪಾಸ್ ಫಲಾನುಭವಿಗಳನ್ನು ಹೊರತುಪಡಿಸಿ) ಪೈಕಿ 30-40 ಲಕ್ಷ ರೂಪಾಯಿ ಕ್ಯುಆ‌ರ್ ಕೋಡ್ ಟಿಕೆಟ್ ವ್ಯವಸ್ಥೆ ಮೂಲಕವೇ ಪಾವತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಎನಿವೇ‌ರ್ ಎನಿಟೈಮ್ ಅಡ್ವಾನ್ಸ್‌ ರಿಸರ್ವೇಶನ್ ಸಿಸ್ಟಮ್ (ಅವತಾ‌ರ್) ಮೂಲಕ 28,000 ಬುಕಿಂಗ್‌ಳಿಂದ ಕೆಎಸ್‌ಆರ್‌ಟಿಸಿ ಇನ್ನೂ 1.5 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ.

2024-25 ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ತನ್ನ ದೈನಂದಿನ ಆದಾಯದ ಶೇ 60-70 ರಷ್ಟನ್ನು ಡಿಜಿಟಲ್ ಮತ್ತು ಕ್ಯುಆ‌ರ್ ಪಾವತಿ ವಿಧಾನಗಳ ಮೂಲಕ ಪಡೆಯುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.


Share News

Comments are closed.

Exit mobile version