ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆಯ ಇನ್ಸ್ಪೆಕ್ಟರ್ ಒಬ್ಬರು ಪೊಲೀಸ್ ಕಾನ್ಸ್ಸ್ಟೇಬಲ್ ಕೈಯಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ lokayukta ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ವರದಿಯಾಗಿದೆ.
ಕೋಣಾಜೆಯಲ್ಲಿರುವ ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆಯ 7ನೇ ಬೆಟಾಲಿಯನ್ನ ನಿರೀಕ್ಷಕ ಮಹಮ್ಮದ್ ಹಾರಿಸ್ ಆವರು ಮೀಸಲು ಪೊಲೀಸ್ ಕಾನ್ಸ್ಸ್ಟೇಬಲ್ ಅನಿಲ್ ಕುಮಾರ್ ಅವರಿಂದ ಕರ್ತವ್ಯ ನಿಯೋಜನೆಗೆ ಸಂಬಂಧಿಸಿ 18 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ನಲ್ಲಿ ಮೀಸಲು ಪೊಲೀಸ್ ಕಾನ್ಸ್ಸ್ಟೇಬಲ್ ಆಗಿರುವ ಅನಿಲ್ ಕುಮಾರ್ ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್ ಪೊಲೀಸ್ ಅತಿಥಿಗೃಹದ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅವರಲ್ಲಿ ಪೊಲೀಸ್ ನಿರೀಕ್ಷಕ ಮಹಮ್ಮದ್ ಹಾರಿಸ್ ಅವರು ಈ ಕರ್ತವ್ಯದಲ್ಲಿ ನೀವು ಮುಂದುವರಿಯಬೇಕಾದರೆ ತನಗೆ 20,000 ರೂ.ನೀಡಬೇಕು ಹಾಗೂ ಪ್ರತಿ ತಿಂಗಳು ತನಗೆ 6,000 ರೂ. ಹಣ ನೀಡಬೇಕೆಂದು ಹೇಳಿದರೆನ್ನಲಾಗಿದೆ. ಅದರಂತೆ ದೂರುದಾರ ಅನಿಲ್ ಕುಮಾರ್ ಪೊಲೀಸ್ ನಿರೀಕ್ಷಕ ಹಾರಿಸ್ಗೆ ಪ್ರತಿ ತಿಂಗಳು 6000 ರೂ. ನೀಡುತ್ತಾ ಬಂದಿದ್ದು, ಈವರೆಗೆ ಒಟ್ಟು 50,000 ನೀಡಿದ್ದರೆನ್ನಲಾಗಿದೆ.
ಅನಿಲ್ ಕುಮಾರ್ ತನ್ನ ತಂದೆಯ ಅನಾರೋಗ್ಯದ ಕಾರಣದಿಂದಾಗಿ 2024ರ ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗಿನ 3 ತಿಂಗಳ ಮೊತ್ತ 18,000 ರೂ.ಗಳನ್ನು ನೀಡಿರಲಿಲ್ಲ. ಈ ಕಾರಣದಿಂದಾಗಿ ದಿನಾಲೂ ಅನಿಲ್ಗೆ ಕರೆ ಮಾಡಿ ನೀಡಲು ಬಾಕಿ ಇರುವುದನ್ನು ನೀಡು, ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಪೊಲೀಸ್ ನಿರೀಕ್ಷಕರು ಬೆದರಿಸುತ್ತಿದ್ದರು ಎಂದು ಲೋಕಾಯುಕ್ತಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ನಿರೀಕ್ಷಕ ಮಹಮ್ಮದ್ ಹಾರಿಸ್ ಬುಧವಾರ 18,000 ರೂ. ಲಂಚವನ್ನು ಕಾನ್ಸ್ಟೇಬಲ್ ಕೈಯಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದಾಗಿ ಪ್ರಕಟನೆ ತಿಳಿಸಿದೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧೀಕ್ಷಕ ಎಂ.ಎ ನಟರಾಜ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್ ಹಾಗೂ ಚಲುವರಾಜು.ಬಿ,ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಸಿ.ಎಲ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.