ನಿರೂಪಣೆ: ಗಣೇಶ್ ಎನ್. ಕಲ್ಲರ್ಪೆ
6 ತಿಂಗಳು ಯುದ್ಧದಲ್ಲಿ ಭಾಗಿ, 21 ತಿಂಗಳು ವೈದ್ಯಕೀಯ ಉಪಚಾರ. ಒಟ್ಟು 27 ತಿಂಗಳು ಸೇನೆಯಲ್ಲಿ ನನ್ನ ಸೇವೆ.
ಎಲ್ಲರೂ ಇದನ್ನು ದುರದೃಷ್ಟ ಅಂತ ಹೇಳ್ತಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡ ನಾನು, ಕೆಲವು ತಿಂಗಳುಗಳಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಕಿತು ಎನ್ನುವುದು ಅವರ ವಾದ. ಆದರೆ ನನಗೆ ಹಾಗೇ ಅನ್ನಿಸಲೇ ಇಲ್ಲ. ಕಾರಣವೂ ಇದೆ. 1970ರ ಯುದ್ಧದ ಬಳಿಕ ಮತ್ತೊಂದು ಯುದ್ಧ ನಡೆದದ್ದು 1999ರಲ್ಲಿ. ಅದು ಕಾರ್ಗಿಲ್ ಯುದ್ಧ. ಇದೇ ಹೊತ್ತಿಗೆ ನಾನು ಸೇನೆಗೆ ಸೇರಿಕೊಂಡೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಎಂತಾ ಅದೃಷ್ಟ ನೋಡಿ.
ಎಷ್ಟೋ ಮಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕರೂ, ದೇಶಕ್ಕಾಗಿ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ಸಿಗಲೇ ಇಲ್ಲ. ಆದರೆ ನನಗೆ ಆ ಭಾಗ್ಯ ದೊರಕಿತು. ಹಾಗಾಗಿ ನಾನು ಅದೃಷ್ಟವಂತ.
ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ ನಾನು ಮೊದಲ ಪ್ರಯತ್ನದಲ್ಲೇ ಸೇನಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಸೇನೆಗೆ ಸೇರಿಕೊಂಡೆ. ಅಕಾಡೆಮಿ ಸೇರಿ ಕೋಚಿಂಗ್ ತೆಗೆದುಕೊಳ್ಳುವವರ ನಡುವೆ, ಸೇನಾ ಮನೆತನದ ಹಿನ್ನೆಲೆ ಇರುವವರ ನಡುವೆ, ನಾನು ಯಾವುದೇ ಹಿನ್ನೆಲೆ ಇಲ್ಲದೇ, ಕೋಚಿಂಗ್ ತೆಗೆದುಕೊಳ್ಳದೇ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾದದ್ದು ನನ್ನ ಅದೃಷ್ಟವಲ್ಲದೇ ಮತ್ತಿನ್ನೇನು.
ಸೇನೆಯಿಂದ ಮೆಡಿಕಲ್ ಡಿಸ್ಚಾರ್ಜ್ ಆದ ಬಳಿಕ ಇಂಡಿಯನ್ ಇಂಜಿನಿಯರಿಂಗ್ ಸರ್ವೀಸ್ ಪರೀಕ್ಷೆ ಬರೆದೆ. ಅಲ್ಲೂ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗಿ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಆಯ್ಕೆಯಾದೆ. ಇದೂ ಅದೃಷ್ಟವೇ. ಅಲ್ಲಿ 20 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡೆ.
ಕೇಂದ್ರ ಸರ್ಕಾರದ ಸೇವೆಯಲ್ಲಿ ಮುಂದುವರಿಯುತ್ತಿದ್ದರೆ ಚೀಫ್ ಇಂಜಿನಿಯರ್ ಆಗಿ ನಿವೃತ್ತಿಗೊಳ್ಳುತ್ತಿದೆ. ಆದರೆ ನಾನು ಸೂಪರಿಟೆಂಡೆಂಡ್ ಇಂಜಿನಿಯರ್ ಆಗಿರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡೆ. ಕಾರಣವೂ ಇದೆ. ಸೇನೆಯ ಬಗ್ಗೆ, ಸೇನಾ ಪರೀಕ್ಷೆಗಳ ಬಗ್ಗೆ ಮಾಹಿತಿ ಕೇಳಿಕೊಂಡು ಹಲವಾರು ಯುವಕರು ನನ್ನ ಬಳಿ ಬರುತ್ತಿದ್ದರು. ಇದಕ್ಕಾಗಿ, ನನ್ನ ಮುಂದಿನ ಜೀವನವನ್ನು ಸೇನೆಯ ಮಾಹಿತಿ ನೀಡಲು ಮೀಸಲಿಡಬೇಕು ಎಂಬ ನಿರ್ಣಯಕ್ಕೆ ಬಂದೆ. ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡು, ಯಾವುದೇ ಫಲಾಪೇಕ್ಷೆ ಇಲ್ಲದೇ ಯುವಕರಿಗೆ ಮಾರ್ಗದರ್ಶನ ನೀಡುವ ಕೆಲಸ, ಸಾರ್ವಜನಿಕರಿಗೆ ಸೇನಾ ವಿಚಾರಗಳನ್ನು ತಿಳಿಸುವ ಕಾಯಕದಲ್ಲಿ ನಾನೀಗ ತೊಡಗಿಸಿಕೊಂಡಿದ್ದೇನೆ.
ಭಾರತೀಯ ಸೇನೆಯೇ ನನ್ನ ಬ್ರ್ಯಾಂಡ್:
ಸೈನ್ಯ ಎಂದರೆ ಶಿಸ್ತು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಇದರೊಂದಿಗೆ, ಸೇನೆಯಲ್ಲಿ ಕೆಲಸ ಮಾಡಿ ಬಂದಿದ್ದೇನೆ ಎಂದರೆ ನನಗೆ ಅದೇ ಒಂದು ಬ್ರ್ಯಾಂಡ್. ಅದು ನನ್ನ ಜೀವನದಲ್ಲೇ ಬ್ರ್ಯಾಂಡ್ ಆಗಿದೆ. ಎಷ್ಟೋ ಜನರ ತ್ಯಾಗ, ಬಲಿದಾನದ ಫಲದಿಂದಾಗಿ ಇಂದು ಭಾರತೀಯ ಸೇನೆಗೆ ಒಂದು ಬ್ರ್ಯಾಂಡ್ ಬಂದಿದೆ. ಸರ್ವಸ್ವವನ್ನು ತ್ಯಾಗ ಮಾಡಿ, ದೇಶವನ್ನು ಕಾಪಾಡಿದ್ದಾರೆ. ಇದರೊಂದಿಗೆ ಬ್ರ್ಯಾಂಡ್ ಜೊತೆಗೂಡಿದೆ.
ಕಾರ್ಗಿಲ್ ಬೆಟ್ಟಗಳ ನಡುವಿನ ಹೋರಾಟ:
1997ರ ಡಿಸೆಂಬರಿನಲ್ಲಿ ಸೇನೆಗೆ ಲೆಫ್ಟಿನೆಂಟ್ ಆಗಿ ಸೇರಿಕೊಂಡೆ. ಬಳಿಕ 1998ರ ಡಿಸೆಂಬರ್’ವರೆಗೆ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ, ಕಮೀಷನ್. ಇದಾಗಿ 3 ವಾರಗಳ ರಜೆ.
ರಜೆ ಮುಗಿಸಿಕೊಂಡು ಬಂದವನಿಗೆ ಸೋಪುರ್’ನ 13 ಬೆಟಾಲಿಯನ್ ಜಮ್ಮು & ಕಾಶ್ಮೀರ್ ರೈಫಲ್ಸ್ ಇಲ್ಲಿ ಮೊದಲ ನೇಮಕಾತಿ ಸಿಕ್ಕಿತು.
ಅದು 1999ರ ಮೇ ತಿಂಗಳು. ಕಾರ್ಗಿಲ್ ಬೆಟ್ಟಗಳನ್ನು ಆಕ್ರಮಿಸಿದ್ದ ಪಾಕಿಸ್ತಾನದ ಸೈನಿಕರು, ಬೆಟ್ಟಗಳ ತುದಿಯಿಂದ ಆಕ್ರಮಣಕ್ಕೆ ಮುಂದಾಗುತ್ತಾರೆ. ನಮ್ಮ ಬೆಟಾಲಿಯನ್ ಗೆ ಆಕ್ರಮಿತ ಎರಡು ಬೆಟ್ಟಗಳನ್ನು ಮರುವಶಪಡಿಸಿಕೊಳ್ಳುವ ಜವಾಬ್ದಾರಿ ನೀಡಲಾಗುತ್ತದೆ. ತಂಡದ ನೇತೃತ್ವ ವಹಿಸಿಕೊಂಡವರು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಕ್ಯಾ. ಸಂಜೀವ್ ಸಿಂಗ್ ಜಾಂಬ್’ವಾಲ್.
ಮೊದಲ ಬೆಟ್ಟ ಪಾಯಿಂಟ್ 5140. ಸಮುದ್ರದಿಂದ ಬೆಟ್ಟ ಎಷ್ಟು ಎತ್ತರದಲ್ಲಿದೆ ಎನ್ನುವುದರ ಮೇಲೆ, ಬೆಟ್ಟಗಳಿಗೆ ಈ ನಂಬರ್ ನೀಡಲಾಗುತ್ತದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಹಾಗೂ ಕ್ಯಾ. ಸಂಜೀವ್ ಸಿಂಗ್ ಜಾಂಬ್’ವಾಲ್ ಎಂತಹ ಅದ್ಭುತ ಹೋರಾಟ ನಡೆಸುತ್ತಾರೆ ಎಂದರೆ, ಕೇವಲ ಎರಡೇ ದಿನದಲ್ಲಿ ಆ ಬೆಟ್ಟ ನಮ್ಮ ಕೈವಶ ಆಗುತ್ತದೆ. ಈ ಹೋರಾಟದಲ್ಲಿ ನನ್ನ ಪಾತ್ರ ಇರಲಿಲ್ಲ.
ಮುಂದಿನ ಬೆಟ್ಟ ಪಾಯಿಂಟ್ 4875. ಪಾಯಿಂಟ್ 5140ಕ್ಕೆ ಗಸ್ತು ಹಾಕಿ, ಬೆಟ್ಟದಿಂದ ಕೆಳಗಿಳಿದೆವು. ಸಾಮಾನ್ಯವಾಗಿ, ಬೆಟ್ಟಗಳ ಮೇಲೆ ಯುದ್ಧಕ್ಕೆ ಹೋಗುವ ಮೊದಲ ಒಂದು ದಿನ ಸಮೀಪದ ಇನ್ನೊಂದು ಬೆಟ್ಟಕ್ಕೆ ಹತ್ತಿ, ಆ ಬೆಟ್ಟದಲ್ಲಿರುವ ಶತ್ರುಗಳ ದಿನಚರಿಯನ್ನು ಅಭ್ಯಾಸ ಮಾಡುತ್ತೇವೆ. ನಂತರ ಯೋಜನೆಯ ರೂಪ, ಕಾರ್ಯಗತ.
ಇನ್ನು ಸರಿಯಾಗಿ ನೆನಪಿದೆ. ಆ ದಿನ 1999ರ ಜುಲೈ 4. ಪಾಯಿಂಟ್ 4875 ಬೆಟ್ಟದ ಮೇಲೆ ಯುದ್ಧ ಸಾರಿದ್ದೇವು. 4, 5, 6ರಂದು ರಾತ್ರಿ – ಹಗಲು ಯುದ್ಧ ನಡೆಯಿತು. ನಿದ್ದೆ, ಆಹಾರ, ನೀರು ಯಾವುದೂ ಇಲ್ಲ. ಇನ್ನು 1 ಬಂಕರ್ ಉಳಿದಿತ್ತಷ್ಟೇ.
ಕೆಳಭಾಗದಿಂದ ಸಂದೇಶ ಕಳುಹಿಸುತ್ತಾರೆ – ಆಹಾರ ಕಳುಹಿಸಲೇ ಎಂದು. ಅದಾಗಲೇ ನಾವು ಆಹಾರ ತಿನ್ನದೇ, ನಿದ್ದೆ ಇಲ್ಲದೇ 48 ಗಂಟೆಗಳಾಗಿತ್ತು. ಸುರಿಯುವ ಮಂಜನ್ನು ಸರಿಸಿ, ಅದರೊಳಗಡೆಯಿದ್ದ ಮಂಜನ್ನಷ್ಟೇ ಬಾಯಿಗೆ ಹಾಕಿಕೊಳ್ಳುತ್ತಿದ್ದೇವು.
ಜುಲೈ 7ರಂದು ಬೆಳಿಗ್ಗೆ. ಕೊನೆ ಬಂಕರಿನ ಮೇಲಿನ ನಮ್ಮ ಯುದ್ಧ. 150 ಜನ ಸೈನಿಕರ ನೇತೃತ್ವ ನಾನು ವಹಿಸಿದ್ದೆ. ನನ್ನ ಕೈಯಲ್ಲಿ ಎಕೆ 47 ಗನ್ ಇತ್ತು. ಒಂದು ಕಲ್ಲಿನ ಸೆರೆಯಲ್ಲಿ ನಿಂತು ಎದುರಾಳಿಗಳ ಮೇಲೆ ದಾಳಿ ನಡೆಸುತ್ತಿದ್ದೆ. ಅಷ್ಟರಲ್ಲಿ, ಶತ್ರು ಪಾಳಯದಿಂದ ಹಾರಿ ಬಂದ ಒಂದು ಹ್ಯಾಂಡ್ ಗ್ರೆನೇಡ್ ನನ್ನ ಬಳಿ ಬಿದ್ದಿತು.
ಅಷ್ಟೇ, ನಾನೇನು ಮಾಡಲು ಸಾಧ್ಯ. ತರಬೇತಿ ಸಂದರ್ಭ ಹೇಳಿಕೊಟ್ಟ ವಿಚಾರಗಳು ತಲೆಯಲ್ಲಿ ಸುಳಿಯಿತು – ಗ್ರೆನೇಡ್ ಅನ್ನು ಬೀಸಿ ಎಸೆದ ಬಳಿಕ ಅದು ಒಂದು ಕಡೆ ಹೋಗಿ ಬೀಳುತ್ತದೆ. ಅದಾಗಿ 4 ಸೆಕೆಂಡ್ ಗಳಲ್ಲಿ ಗ್ರೆನೇಡ್ ಸ್ಫೋಟಗೊಳ್ಳುತ್ತದೆ ಎಂದು. ಹಾಗಾಗಿ, ನನ್ನಲ್ಲಿ 4 ಸೆಕೆಂಡ್ ಗಳ ಸಮಯ ಮಾತ್ರ ಇತ್ತು. ಆಸುಪಾಸಿನಲ್ಲಿ ಬಿಸಾಡುವಂತಿರಲಿಲ್ಲ. ಅಲ್ಲಿ ನಮ್ಮ ಸೈನಿಕರಿದ್ದರು. ಸಾಧ್ಯವಾದಷ್ಟು ಬೀಸಿ ಎಸೆದೆ. ಒಂದು ಕೈಯಲ್ಲಿ ಗನ್, ಪಕ್ಕದಲ್ಲಿ ಕಲ್ಲು. ಕೈಯಲ್ಲಿ ಗ್ರೆನೇಡನ್ನು ಬೀಸಲು ಸಾಧ್ಯವಿಲ್ಲದಷ್ಟು ಕಿರಿದಾದ ಜಾಗ. ಹಾಗಾಗಿ, ಗ್ರೆನೇಡ್ ಪಕ್ಕದ ಕಲ್ಲಿಗೆ ಬಡಿದು, ಮತ್ತೆ ನನ್ನ ಕಾಲ ಬುಡದಲ್ಲೇ ಬಿದ್ದಿತು.
ಕೇವಲ 1 ಸೆಕೆಂಡ್ ಮಾತ್ರ ನನ್ನಲ್ಲಿತ್ತು. ಅಷ್ಟರಲ್ಲಿ ನನ್ನ ಬಾಲ್ಯ, ಶಾಲಾ – ಕಾಲೇಜು ದಿನಗಳು, ಹೆತ್ತವರು ನೆನಪಿಗೆ ಬಂದರು. ಸಾಯುವುದು ನಿಶ್ಚಿತ. ಆದರೆ ನನ್ನ ದೇಹವನ್ನು ಗುರುತು ಹಿಡಿಯಲಾರದ ಸ್ಥಿತಿಯಲ್ಲಿ ಮನೆಯವರು ನೋಡುವುದೇ? ಬೇಡ ಹಾಗಾಗಬಾರದು ಎಂದು ನಿಶ್ಚಯಿಸಿದೆ. ತಲೆಯನ್ನು ಮುಂದೆ ಮಾಡಿ, ಪಕ್ಕದಲ್ಲೇ ಇದ್ದ ಕಲ್ಲಿನ ಸೆರೆಗೆ ಹಾರಿದೆ. ಕಾಲುಗಳು ಹಿಂದುಳಿದವು. ಕ್ಷಣದಲ್ಲಿ ಗ್ರೆನೇಡ್ ಸಿಡಿಯಿತು. ಕಾಲುಗಳು ಛಿದ್ರಗೊಂಡವು.
ಒಂದಷ್ಟು ಸೆಕೆಂಡ್ ಏನಾಯಿತು ಎಂದು ತಿಳಿಯಲೇ ಇಲ್ಲ. ಮೆಲ್ಲನೇ ಪ್ರಜ್ಞೆ ಮರಳತೊಡಗಿತು. ನನ್ನ ಮುಂದೆ ಕ್ಯಾ. ವಿಕ್ರಮ್ ಬಾತ್ರಾ ಓಡೋಡಿ ಬರುತ್ತಿದ್ದರು. “ನವೀನ್ ತು ಡರ್ ನಾ ನಹೀ. ಮೇ ಆಯಾ…” ಎಂದು ರಕ್ಷಣೆಗೆ ಓಡೋಡಿ ಬಂದರು. ಯುದ್ಧವನ್ನು ನಾನು ಮುಂದುವರಿಸುತ್ತೇನೆ. ನೀನು ಕೆಳಭಾಗಕ್ಕೆ ಹೋಗಿ, ಚಿಕಿತ್ಸೆ ತೆಗೆದುಕೋ ಎಂದು ಸೂಚಿಸಿದರು. ನಾನು ತೆವಳುತ್ತಾ ಇನ್ನೊಂದು ಬಂಡೆಯತ್ತ ಸರಿದೆ. ಬಂಡೆಯ ಬಳಿ ತಲುಪಿ ಹಿಂದಿರುಗಿ ನೋಡಿದರೆ, ತೆವಳುತ್ತಾ ಬಂದ ಜಾಗ ಸಂಪೂರ್ಣ ರಕ್ತಮಯವಾಗಿತ್ತು. ಕಾಲು ನೋಡಿದೆ, ಎಳೆದರೆ ಕಿತ್ತು ಬಂದುಬಿಡುತ್ತದೋ ಎಂಬಂತಿತ್ತು.
ಓರ್ವ ಸೈನಿಕ ನನ್ನನ್ನು ಭುಜದಲ್ಲಿ ಹಾಕಿ, ಬೆಟ್ಟದ ಕೆಳಭಾಗಕ್ಕೆ ಕೊಂಡೊಯ್ದರು.
ಕ್ಯಾ. ವಿಕ್ರಮ್ ಬಾತ್ರಾ ಅಮರ್ ರಹೇ:
ಬೆಟ್ಟದ ಕೆಳಭಾಗದಲ್ಲಿ ನನ್ನ ಚಿಕಿತ್ಸೆ ನಡೆಯುತ್ತಿತ್ತು. ದಾದಿಯೊಬ್ಬರು ಬಂದು, ನಿಮ್ಮ ತ್ಯಾಗ ನಿಷ್ಫಲಗೊಳ್ಳಲಿಲ್ಲ. ಆ ಬೆಟ್ಟ ನಮ್ಮ ಕೈವಶವಾಯಿತು. ಆದರೆ, ಕ್ಯಾ. ವಿಕ್ರಮ್ ಬಾತ್ರಾ ಅಮರರಾದರು ಎಂದರು.
ಆ ಕ್ಷಣ ನಾನೇನು ಪ್ರತಿಕ್ರಿಯಿಸಲಿ. ಬೆಟ್ಟದತ್ತ ಒಮ್ಮೆ ನೋಡಿ, ನೋವಿನ ಕೈಗಳಿಂದ ಸೆಲ್ಯೂಟ್ ಮಾಡಿದೆ.
ಕ್ಯಾ. ವಿಕ್ರಮ್ ಬಾತ್ರಾ, ಕ್ಯಾ. ಸಂಜೀವ್ ಸಿಂಗ್ ಜಾಂಬ್ ವಾಲ್ ಅವರೊಂದಿಗೆ ಇನ್ನೋರ್ವ ಡೇರ್ ಡೆವಿಲ್ ಆಫೀಸರ್ ಅವರನ್ನು ನೆನೆಯಲೇ ಬೇಕು. ಅವರು, ಮೇಜರ್ ಅಜಯ್ ಸಿಂಗ್ ಜಸ್ರೋಟಿಯಾ. ಇವರು ನನಗಿಂತ ಒಂದು ವರ್ಷ ಸೀನಿಯರ್. ಆದರೆ ಅವರು ಸಲ್ಲಿಸಿದ ಸೇವೆ, ನಮ್ಮೊಂದಿಗಿದ್ದ ಒಡನಾಟದ ಕ್ಷಣಗಳು ಅನುಪಮ.
ನಮ್ಮ ಬೆಟಾಲಿಯನ್’ನಲ್ಲಿ ಮೇಜರ್ ಅಜಯ್ ಸಿಂಗ್ ಜಸ್ರೋಟಿಯಾ ಹಾಗೂ ಕ್ಯಾ. ವಿಕ್ರಮ್ ಬಾತ್ರಾ ಸಹಿತ 15 ಸೈನಿಕರನ್ನು ನಾವು ಕಳೆದುಕೊಂಡೆವು.
ಒಂದು ವೇಳೆ ನಾನು ಈಗಲೂ ಸೇನೆಯಲ್ಲಿರುತ್ತಿದ್ದರೆ ಬ್ರಿಗೇಡಿಯರ್ ಹುದ್ದೆಯಲ್ಲಿರುತ್ತಿದೆ. ನನ್ನ ಜೊತೆಗಿದ್ದವರು ಈಗ ಬ್ರಿಗೇಡಿಯರ್ ಆಗಿದ್ದಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡಿದ್ದ ನಾನು ಸ್ವಯಂ ನಿವೃತ್ತಿಯನ್ನು ಪಡೆದುಕೊಳ್ಳುತ್ತಿರಲಿಲ್ಲ. ಸೇನಾ ಸಮವಸ್ತ್ರ ಧರಿಸಿ ಕೆಲಸ ಮಾಡಬೇಕು ಎಂಬುದೇ ನನ್ನ ಕನಸಾಗಿತ್ತು.
ದುರ್ಗಿ ಮಾತಾ ಕೀ ಜೈ:
ದುರ್ಗಿ ಮಾತಾ ಕೀ ಜೈ ಎನ್ನುವುದು ನಮ್ಮ ಬೆಟಾಲಿಯನ್ ನ ಘೋಷ ವಾಕ್ಯ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಬೆಟಾಲಿಯನ್ ನ ಸೇವೆ, ತ್ಯಾಗ ದೊಡ್ಡ ಮಟ್ಟದಲ್ಲೇ ಇತ್ತು. ಭಾರತದ ಇತಿಹಾಸದಲ್ಲೇ ಒಂದು ಯುದ್ಧದಲ್ಲಿ ಒಂದು ಬೆಟಾಲಿಯನ್’ಗೆ ಎರಡು ಪರಮವೀರ ಚಕ್ರ ಸಿಕ್ಕಿದ್ದರೆ, ಅದು ನಮ್ಮ ಬೆಟಾಲಿಯನ್’ಗೆ ಮಾತ್ರ. ಒಬ್ಬರು ಕ್ಯಾ. ವಿಕ್ರಮ್ ಬಾತ್ರಾ ಹಾಗೂ ರೈಫಲ್ ಮ್ಯಾನ್ ಸಂಜಯ್ ಕುಮಾರ್.
ಲೆಫ್ಟಿನೆಂಟ್ ಕರ್ನಲ್ ಜೋಶಿ ಅವರು ಲೆಫ್ಟಿನೆಂಟ್ ಜನರಲ್ ಆಗಿ, ಆರ್ಮಿ ಕಮಾಂಡರ್ ಆಗಿ ನಿವೃತ್ತರಾದರು. ಮೇಜರ್ ಗುರುಪ್ರೀತ್, ಮೇಜರ್ ಭಾಸ್ಕರ್ ನಮ್ಮ ರೆಜಿಮೆಂಟಿನಲ್ಲಿದ್ದರು. ಇಂತಹ ಉತ್ತಮ ಅಧಿಕಾರಿಗಳಿಂದಲೇ ಸೈನ್ಯ ಉತ್ತಮವಾಗಿ ಮುನ್ನಡೆಯುತ್ತದೆ. ಇದರೊಂದಿಗೆ ಜವಾನ್ಸ್ ಸೇವೆ ಮರೆಯಲು ಸಾಧ್ಯವಿಲ್ಲ.
ಕಾರ್ಗಿಲ್ ಯುದ್ಧ ನೀಡಿದ ಸಂದೇಶ:
ಯುದ್ಧ ಪ್ರಾರಂಭಿಸಿದವರು, ಯಾವ ಉದ್ದೇಶ ಇಟ್ಟುಕೊಂಡಿದ್ದರೋ ಅದನ್ನು ಈಡೇರದಂತೆ ಮಾಡಿದ್ದೇ ಭಾರತದ ಸಾಧನೆ. ಇದು ಕಾರ್ಗಿಲ್ ಯುದ್ಧ ನೀಡಿದ ಸ್ಪಷ್ಟ ಸಂದೇಶ.
ರಾಷ್ಟ್ರೀಯ ಹೆದ್ದಾರಿಯನ್ನು ಹಿಡಿತಕ್ಕೆ ತರುವ ಉದ್ದೇಶದಿಂದಲೇ ಬೆಟ್ಟದ ಮೇಲೆ ಪಾಕಿಸ್ತಾನದ ಸೈನಿಕರು ಆಕ್ರಮಿತಗೊಂಡಿದ್ದರು. ಕೆಳಭಾಗದಲ್ಲಿ ನಮ್ಮ ಕಾನ್ವಾಯಿ (30- 40 ವಾಹನಗಳ ಸಾಲು) ಶುರುವಾಗುತ್ತಿದ್ದಂತೆ, ಮೇಲ್ಭಾಗದಿಂದ ಶೆಲ್ಲಿಂಗ್ (ಗುಂಡಿನ ಸುರಿಮಳೆ) ಮಾಡುತ್ತಿದ್ದರು. ಅಂದರೆ ವಾಹನ ಸಾಗಾಟ ಒಂದು ಕಡೆಯಿಂದ ಇನ್ನೊಂದು ಕಡೆ ತೆರಳುವುದನ್ನು ನಿರ್ಬಂಧಿಸಬೇಕಿತ್ತು. ಲೇ ಲಡಾಕ್, ಸಿಯಾಚಿನ್ ಮೊದಲಾದ ಭಾಗಗಳಿಗೆ ನಾವು ತೆರಳುವುದನ್ನು ತಡೆಯಬೇಕಿತ್ತು. ನಮ್ಮ ಸೈನಿಕರಿಗೆ ಆಹಾರ ಸಿಗದಂತೆ ಮಾಡುವುದು ಅವರ ಮೊದಲ ಉದ್ದೇಶವಾಗಿತ್ತು. ಹಾಗೂ ಸಿಯಾಚಿನನ್ನು ವಶಪಡಿಸಿಕೊಳ್ಳುವುದು ಅವರ ಪ್ರಮುಖ ಉದ್ದೇಶವಾಗಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಮಾಧ್ಯಮಕ್ಕೆ, ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತದ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸುವ ಉದ್ದೇಶ ಪಾಕಿಸ್ತಾನಕ್ಕಿತ್ತು. ಈ ಉದ್ದೇಶವನ್ನು ಸಫಲಗೊಳಿಸಲು ಬಿಡದ ಭಾರತ, ಎದುರಾಳಿ ಪಾಕಿಸ್ತಾನಕ್ಕೆ ಪ್ರಖರವಾದ ಏಟು ನೀಡಿತು. ಆ ಏಟು ಹೇಗಿತ್ತು ಎಂದರೆ, ಪಾಕಿಸ್ತಾನ ಇಂದು ಕೂಡ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಭಾರತೀಯ ಸೈನ್ಯದ ಸಾಮರ್ಥ್ಯ ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಯುವಂತೆ ಮಾಡಿತು.
ಕಾರ್ಗಿಲ್ ಯುದ್ದದ ಬಳಿಕ ಪಾಕಿಸ್ತಾನದಲ್ಲಿ ಒಳಯುದ್ಧ ಪ್ರಾರಂಭವಾಯಿತು. ಅಧ್ಯಕ್ಷ ನವಾಜ್ ಷರೀಫ್ ಹೊರದೇಶಕ್ಕೆ ಹೋಗಿ ಬರುವಾಗ, ಅವರ ವಿಮಾನವನ್ನು ಆಗಿನ ಆರ್ಮಿ ಚೀಫ್ ಪರ್ವೇಜ್ ಮುಷರಫ್ ತಡೆದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಅವಮಾನಕ್ಕೀಡಾಗುವಂತೆ ಮಾಡಿತು.
ಮೌಂಟೇನ್ ವಾರ್ ಫೇರ್ ನಲ್ಲಿ ಭಾರತದ 527 ಸೈನಿಕರು ವೀರ ಮರಣವನ್ನಪ್ಪಿದ್ದಾರೆ. ಪಾಕಿಸ್ತಾನದ 800ಕ್ಕೂ ಅಧಿಕ ಸೈನಿಕರು ಮೃತಪಟ್ಟಿದ್ದಾರೆ ಎನ್ನುವುದು ಗುಪ್ತಚರ ಮಾಹಿತಿ. ಆದರೆ ಪಾಕಿಸ್ತಾನ ಇದುವರೆಗೆ ಇದರ ಬಗ್ಗೆ ಅಧಿಕೃತ ಮಾಹಿತಿ ನೀಡಲೇ ಇಲ್ಲ. ಆದರೂ, ಭಾರತದ ಸೈನ್ಯ ಪಾಕಿಸ್ತಾನ ಸೈನ್ಯದ ಆ ಮೃತದೇಹಗಳನ್ನು ಅದೇ ಬೆಟ್ಟದ ಮೇಲೆ, ಅವರ ಸಂಪ್ರದಾಯದ ಪ್ರಕಾರವೇ, ಅವರ ಧ್ವಜವನ್ನು ಮೃತದೇಹದ ಮೇಲೆ ಹಾಕಿ ದಫನ ಮಾಡಿತು. ಅಂದರೆ, ಭಾರತದ ಸೈನ್ಯ ನೈತಿಕತೆಯೊಂದಿಗೆ ರಾಜಿ ಮಾಡುವುದಿಲ್ಲ ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟಿತು.
ಕ್ಯಾ. ವಿಕ್ರಮ್ ಬಾತ್ರಾ ಅವರು ಮೃತಪಟ್ಟ ಬೆಟ್ಟದ ಮೇಲೆಯೇ ಪಾಕಿಸ್ತಾನ ಸೈನಿಕರ ಮೃತದೇಹಗಳನ್ನು ದಫನ ಮಾಡಲಾಯಿತು.
ಸೌಮ್ಯ ನವೀನ್ ತೆಗೆದುಕೊಂಡ ದೃಢ ನಿಲುವು:
2001ರಲ್ಲಿ ನಾನು ಸೈನ್ಯದಿಂದ ಮೆಡಿಕಲ್ ಡಿಸ್ಚಾರ್ಜ್ ಆದೆ. 2004ರಲ್ಲಿ ವಿವಾಹದ ಸಿದ್ಧತೆ ನಡೆಯಿತು. ಮೂಲತಃ ಹುಬ್ಬಳ್ಳಿಯವನಾದ ನನಗೆ, ತುಮಕೂರಿನ ಸೌಮ್ಯ ಅವರೊಂದಿಗೆ ಮಾತುಕತೆಯ ಪ್ರಸ್ತಾಪ ಬಂದಿತು.
ಏನಾಯಿತೋ ಗೊತ್ತಿಲ್ಲ, ಎಷ್ಟಾದರೂ ಜೀವನದ ಪ್ರಶ್ನೆಯಲ್ಲವೇ? ಸಮಾಜವೂ ಮಾತನಾಡಿಕೊಳ್ಳುತ್ತದೆ. ಕಾಲು ಊನವಿರುವ ಹುಡುಗನಿಗೆ ಮಗಳನ್ನು ಕೊಡುತ್ತೀರಾ ಎಂಬ ಪ್ರಶ್ನೆಯೂ ಎದ್ದಿರಬಹುದು. ಸೌಮ್ಯ ಅವರ ತಂದೆ ವಿವಾಹದ ಪ್ರಸ್ತಾಪದಿಂದ ಹಿಂದೆ ಸರಿಯುವ ಮಾತನ್ನು ಮುಂದಿಟ್ಟರು. ಆ ಹೊತ್ತಿನಲ್ಲಿ ಸೌಮ್ಯ ದೃಢ ನಿಲುವು ತೆಗೆದುಕೊಂಡರು.
ಕಾಲು ಊನವಿದೆ, ವಿಶೇಷ ಚೇತನ ಎಂಬ ಕಾರಣಕ್ಕೆ ಮದುವೆ ನಿರಾಕರಿಸುತ್ತೀರಿ ಎಂದರೆ, ಜೀವನದಲ್ಲಿ ನಾನೆಂದು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ ಎಂದುಬಿಟ್ಟರು. ಮದುವೆಗೆ ಮನೆಯವರು ಒಪ್ಪಿಕೊಂಡರು. ಮತ್ತೆಲ್ಲವೂ ಸುಸೂತ್ರ. ನಮಗೆ ಒಬ್ಬಾಕೆ ಮಗಳು. ಹೆಸರು ಸವೇರಾ. ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದು, ವೈದ್ಯಕೀಯ ವಿದ್ಯಾಭ್ಯಾಸದ ಆಕಾಂಕ್ಷೆ ಹೊಂದಿದ್ದಾಳೆ.
ನನ್ನ ತಂದೆ ದಿ. ನಾಗಪ್ಪ, ತಾಯಿ ದಿ. ಶಾರದಾ. ಓರ್ವ ಸಹೋದರ. ಇಬ್ಬರು ಸಹೋದರಿಯರು.
ನನ್ನದೊಂದು ಅಪೇಕ್ಷೆ:
ಕಾರ್ಗಿಲ್ ಕದನದಲ್ಲಿ 527 ಸೈನಿಕರು ಸಾವನ್ನಪ್ಪಿದರು. 1300ಕ್ಕೂ ಅಧಿಕ ಸೈನಿಕರು ಗಾಯಗೊಂಡರು. ಇದಾಗಿ 25 ವರ್ಷ ಸರಿದು ಹೋಯಿತು. ಅವರನ್ನು ನೆನೆಪಿಸಿಕೊಳ್ಳುವ ಕೆಲಸವನ್ನು ಜುಲೈ 26ರಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಹಣತೆ ಬೆಳಗುವ ಮೂಲಕ ಮಾಡಬೇಕು ಎನ್ನುವುದು ನನ್ನ ಕೋರಿಕೆ.
ಇನ್ನೊಂದು ಕೋರಿಕೆ, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಸರ್ಕಾರದ ನೆರವು ಸಿಕ್ಕಿರುತ್ತದೆ. ಆದರೆ ಅಷ್ಟೇ ಸಾಕೇ? ಅವರಿಗೆ ನೋವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ನಮ್ಮದು. ನೀವು ಯಾವುದೇ ಊರಿಗೆ ಹೋದಾಗ, ಆಸುಪಾಸು ಸೈನಿಕರ ಮನೆ ಇದೆಯೋ ಎಂದು ನೋಡಿಕೊಳ್ಳಿ. ಇದ್ದರೆ, ಭೇಟಿ ಕೊಡಿ. ಮನೆಯವರ ಜೊತೆ ನಾವಿದ್ದೇವೆ ಎಂಬ ವಿಶ್ವಾಸ ತುಂಬಿಸಿ. ಇದಕ್ಕಿಂತ ಹೆಚ್ಚು ಓರ್ವ ಸೈನಿಕನಿಗೆ ಏನು ಬೇಕು?