ಪುತ್ತೂರು: ತಾಲೂಕಿನ ಅಥವಾ ಪುತ್ತೂರು ಪೇಟೆಯ ಮಟ್ಟಿಗೆ ನ್ಯೂ ಗಣೇಶ್ ಪ್ರಸಾದ್ ಹೋಟೆಲಿನ ಸ್ವಾದ ಸವಿಯದವರು ಯಾರೂ ಇರಲಾರರು. ಹಾಗೊಂದು ವೇಳೆ ಸ್ವಾದ ಸವಿಯಲಿಲ್ಲ ಎಂದಾದರೆ ತಕ್ಷಣವೇ ಹೋಟೆಲಿಗೆ ಭೇಟಿ ನೀಡಿ.
ಅರೆ… ಇದ್ಯಾಕೆ ಹೀಗೆ ಎಂದು ಪ್ರಶ್ನಿಸುತ್ತೀರಾ? ಹೌದು, ಜೂನ್ 28ರ ಬಳಿಕ ಅಂದರೆ ಶುಕ್ರವಾರದಿಂದ ಈ ಹೋಟೆಲ್ ಇರುವುದಿಲ್ಲ.
ಬೋನಂತಾಯ ಆಸ್ಪತ್ರೆ ಬಳಿಯ, ಎಸ್.ಪಿ.ಟಿ. ಬ್ರಿಡ್ಜ್ ಎಂದೇ ಖ್ಯಾತವಾದ ಪುತ್ತೂರಿನ ಸೇತುವೆ ಪಕ್ಕದಲ್ಲೇ ಇದ್ದ ಈ ಹೋಟೆಲ್ ತನ್ನ 40 ವರ್ಷಗಳ ಪಯಣವನ್ನು ಕೊನೆಗೊಳಿಸುತ್ತಿದೆ.
1984ರ ಫೆಬ್ರುವರಿ 12ರಂದು ಬೆಳಗ್ಗಿನಿಂದಲೇ ಕಾರ್ಯಾರಂಭ ಮಾಡಿದ ಈ ಹೋಟೆಲ್ ಇದುವರೆಗೆ ಪುತ್ತೂರಿಗರಷ್ಟೇ ಅಲ್ಲ ಹೊರ ಊರಿನಿಂದ ಬಂದವರ ಹಸಿವನ್ನು ತಣಿಸಿದ್ದು ಮಾತ್ರವಲ್ಲ, ತನ್ನ ಸ್ವಾದಕ್ಕೆ ಮಾರು ಹೋಗುವಂತೆ ಮಾಡಿತು.
ಶ್ರೀ ಗಣೇಶ್ ಪ್ರಸಾದ್ ಹೊಟೇಲ್ ಮೊದಲ ಬಾರಿಗೆ ಪುತ್ತೂರಿನಲ್ಲಿ ಪರಿಚಯಿಸಿದ ಕೀರ್ತಿ ನರಸಿಂಹ ಹೇರಳೆ ಅವರಿಗೆ ಸಲ್ಲುತ್ತದೆ. ಸಂಗೀತ ವಿದ್ವಾನ್ ಆಗಿದ್ದ ನರಸಿಂಹ ಹೇರಳೆ ಅವರು, ಹೋಟೆಲ್ ಉದ್ಯಮವನ್ನು ಅರಗಿಸಿಕೊಂಡದ್ದು ಮದ್ರಾಸಿನಲ್ಲಿ. ಬಳಿಕ ಕಾಂಞಿಗಾಡ್, ಕಣ್ಣನೂರಿನಲ್ಲಿ ಹೋಟೆಲ್ ಉದ್ಯಮ ನಡೆಸಿದರು.
1979ರಲ್ಲಿ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆ ಪಕ್ಕದಲ್ಲಿದ್ದ ದೇವಸ್ಥಾನದ ಕಟ್ಟಡದಲ್ಲಿ ಗಣೇಶ್ ಪ್ರಸಾದ್ ಹೋಟೆಲ್ ಪರಿಚಯಿಸಲ್ಪಟ್ಟಿತು. 1984ರ ಫೆಬ್ರುವರಿ 12ರಂದು ಅಲ್ಲೇ ಎದುರಿನ ಕಟ್ಟಡದಲ್ಲಿ ನ್ಯೂ ಗಣೇಶ್ ಪ್ರಸಾದ್ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮದ ಇನ್ನೊಂದು ಶಾಖೆಯನ್ನು ತೆರೆದರು.
ತಂದೆಯ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿದ ಗೋಪಾಲಕೃಷ್ಣ ಹೇರಳೆಯವರು 1989ರಲ್ಲಿ ಜಿ.ಎಲ್. ಕಾಂಪ್ಲೆಕ್ಸ್ ನಲ್ಲಿ ಶ್ರೀ ಗಣೇಶ್ ಪ್ರಸಾದ್ ಹೋಟೆಲ್ ಅನ್ನು ಅದ್ದೂರಿಯಾಗಿ ಆರಂಭಿಸಿದರು.
ಇದೀಗ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ತೆರೆ ಮರೆಗೆ ಸರಿಯುತ್ತಿದೆ. ಕಾರಣ, ಬೋನಂತಾಯ ಕಟ್ಟಡವನ್ನು ನೆಲಸಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ನ್ಯೂ ಗಣೇಶ್ ಪ್ರಸಾದ್ ಕಟ್ಟಡವೂ ನೆಲಸಮಗೊಳ್ಳುತ್ತಿದೆ.
ಸ್ಥಳಾಂತರದ ಬಗ್ಗೆ ಮಾಲಕರ ಮಾತು:
ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಅನ್ನು ಸದ್ಯಕ್ಕೆ ಮುಚ್ಚುತ್ತಿದ್ದೇವೆ. ಕಟ್ಟಡ ನೆಲಸಮ ಆಗುತ್ತಿರುವುದೇ ಇದಕ್ಕೆ ಕಾರಣ. ಸ್ಥಳಾಂತರದ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ.
– ಗೋಪಾಲಕೃಷ್ಣ ಹೇರಳೆ, ಮಾಲಕರು