ಆಸ್ಪತ್ರೆಯ ಎಡವಟ್ಟು ಘಟನೆಗಳನ್ನು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಆದರೆ ಇದೀಗ ನಡೆದ ಘಟನೆ ಆಸ್ಪತ್ರೆಗೆ ದಾಖಲಾಗಲು ಬೆಚ್ಚಿ ಬೀಳುವಂತಿದೆ.
ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ರೋಗಿಯ ಕಣ್ಣು ಕಾಣೆಯಾಗಿರುವ ವಿಚಿತ್ರ ಘಟನೆಯೊಂದು ಶನಿವಾರ(ನ.16) ಬೆಳಕಿಗೆ ಬಂದಿದೆ.
ವಿಚಾರ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಗೊತ್ತಾಗುತ್ತಿದ್ದಂತೆ ವ್ಯಕ್ತಿಯ ಕುಟುಂಬ ಸದಸ್ಯರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ, ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ ಈ ವೇಳೆ ಮೃತ ವ್ಯಕ್ತಿಯ ಪೋಷಕರು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ ಈ ವೇಳೆ ಪ್ರತಿಕ್ರಿಯೆ ನೀಡಿದ ವೈದ್ಯರು ಮೃತ ವ್ಯಕ್ತಿಯ ಕಣ್ಣನ್ನು ಇಲಿ ತಿಂದಿರಬಹುದು ಎಂದು ಸಬೂಬು ನೀಡಿದ್ದಾರೆ.
ನವೆಂಬರ್ 14 ರಂದು ಅಪರಿಚಿತ ದುಷ್ಕರ್ಮಿಗಳು ಫಂತುಷ್ ಎಂಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ ಇದಾದ ಬಳಿಕ ಆತನನ್ನು ನಳಂದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದು ನವೆಂಬರ್ 15 ರಂದು ಆತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಐಸಿಯುಗೆ ಸ್ಥಳಾಂತರಿಸಲಾಯಿತು. ಆದರೆ ದುರದೃಷ್ಟವಶಾತ್ ಫಂತುಷ್ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ ಆದರೆ ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಾಗದ ಕಾರಣ ಅವರ ದೇಹವನ್ನು ಐಸಿಯು ಹಾಸಿಗೆಯ ಮೇಲೆ ಇರಿಸಲಾಗಿತ್ತು.
ಶನಿವಾರ ಬೆಳಿಗ್ಗೆ ನೋಡಿದಾಗ ಫಂತುಷ್ ಅವರ ಎಡ ಕಣ್ಣು ಕಾಣೆಯಾಗಿತ್ತು ಅಲ್ಲದೆ ಆತನ ಬೆಡ್ ನ ಬದಿಯಲ್ಲಿ ಸರ್ಜಿಕಲ್ ಬ್ಲೇಡ್ ಕಂಡುಬಂದಿದ್ದು ಇದರಿಂದ ಆಸ್ಪತ್ರೆ ಸಿಬಂದಿಗಳೇ ಕಣ್ಣು ತೆಗೆದಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಆದರೆ ಕುಟುಂಬ ಸದಸ್ಯರ ಆರೋಪವನ್ನು ತಳ್ಳಿ ಹಾಕಿದ ಆಸ್ಪತ್ರೆ ವೈದ್ಯರು ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಬದಲಾಗಿ ಇಲಿ ತಿಂದಿರಬೇಕು ಎಂದು ಹೇಳಿಕೆ ನೀಡಿದ್ದಾರೆ.