ಬೆಂಗಳೂರು: ಗಂಡನ ಮೇಲೆ ಮುನಿಸಿಕೊಂಡು ಮದುವೆಯಾಗಿ ಏಳು ವರ್ಷ ಕಳೆದರೂ ಫಸ್ಟ್ ನೈಟ್ಗೆ ಒಪ್ಪದ ಮಹಿಳೆಗೆ ಹೈಕೋರ್ಟ್ ವಿಚ್ಛೇದನ ಮಂಜೂರಾತಿ ನೀಡಿದೆ.
ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡದ ಹಿನ್ನೆಲೆಯಲ್ಲಿ ವೈವಾಹಿಕ ಜೀವನ ನಡೆಸಲು ಆಸಕ್ತಿ ತೋರದ ಮಹಿಳೆಗೆ ಗಂಡನೊಂದಿಗೆ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿನಾಕಾರಣ ದೂಷಿಸುತ್ತಾ ಬೆಡ್ ರೂಂನಲ್ಲಿ ಪತಿ ಮೇಲೆ ಹಲ್ಲೆ ನಡೆಸಿದ ಮತ್ತು ಬೇರೊಂದು ವರನನ್ನು ಹುಡುಕಿ ವಿವಾಹವಾಗಲು ವಿಚ್ಛೇದನ ನೀಡುವಂತೆ 127 ಪುಟಗಳ ವಾಟ್ಸಾಪ್ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಪತ್ನಿಯ ವರ್ತನೆಯನ್ನು ಪರಿಗಣಿಸಿದ ಹೈಕೋರ್ಟ್ ವಿಚ್ಛೇದನ ಮಂಜೂರಾತಿ ಕಾಯಂಗೊಳಿಸಿದೆ.
ರವಿ ಎಂಬುವರು ಪೋಷಕರ ನಿಶ್ಚಯಿಸಿದ ಮಹಿಳೆ ಜತೆ 2017ರ ಸೆ.27ರಂದು ಮದುವೆಯಾಗಿದ್ದರು. ಆದರೆ, ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ 2019ರಲ್ಲಿ ರವಿ ಅರ್ಜಿ ಸಲ್ಲಿಸಿದ್ದರು. ಮದುವೆ ನಂತರ ನನ್ನ ಮನೆಗೆ ಬಂದ ಪತ್ನಿ. ತನ್ನ ಅಂತಸ್ತು ಹಾಗೂ ಕನಸಿಗೆ ತಕ್ಕಂತೆ ಅದ್ಧೂರಿಯಾಗಿ ಆರತಕ್ಷತೆ ಮಾಡಿಲ್ಲ ಎಂದು ಆಕ್ಷೇಪಿಸಿ ಮೊದಲ ರಾತ್ರಿಗೆ ಒಪ್ಪಿರಲಿಲ್ಲ. ನಂತರ ಒಂದಲ್ಲ ಒಂದು ಕಾರಣ ನೀಡಿ ಮೊದಲ ರಾತ್ರಿಯನ್ನು ಮುಂದೂಡುತ್ತಲೇ ಬಂದರು. ಜತೆಗೆ ಹಲವು ಕಾರಣ ನೀಡಿ ನನ್ನನ್ನು ನಿಂದಿಸುತ್ತಿದ್ದರು. ಕೆಲ ಸಂದರ್ಭದಲ್ಲಂತೂ ಬೆಡ್ ರೂಂನಲ್ಲಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ನೀನು ಕಡಿಮೆ ವೇತನ ಪಡೆಯುತ್ತಿದ್ದು, ತನ್ನ ಕನಸುಗಳನ್ನು ಈಡೇರಿಸಲು ಹಣ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ನೀನು ಇಲ್ಲ. ಹೀಗಾಗಿ, ತವರು ಮನೆಗೆ ಕಳುಹಿಸುವಂತೆ ಪತ್ನಿ ನನಗೆ ಒತ್ತಾಯಿಸುತ್ತಿದ್ದರು. ಮದುವೆ ಆದ ಕೆಲ ತಿಂಗಳ ನಂತರ ಅಪಘಾತದಿಂದ ಪತ್ನಿಯ ತಂದೆ ಸಾವನ್ನಪ್ಪಿದ್ದರೆ, ಅದಕ್ಕೂ ನಾನೇ ಕಾರಣ ಎಂದು ದೂಷಿಸಿದರು. ಈ ಎಲ್ಲಾ ಸಂಗತಿ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ರವಿ ಕೋರಿದ್ದರು. ಇವರ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು 2022ರ ಜ.30ರಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಪತ್ನಿ, ಪತಿಯನ್ನು ನಾನು ಪ್ರೀತಿಸುತ್ತಿದ್ದೇನೆ. ವೈವಾಹಿಕ ಜೀವನ ಮುಂದುವರಿಸಲು ಬಯಸುತ್ತಿದ್ದೇನೆ. ಹಾಗಾಗಿ, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಕಿರುಕುಳ ನೀಡಲೆಂದೇ ಪತ್ನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬ ಪತಿಯ ವಾದವೂ ಸತ್ಯವಾಗಿರುವ ಸಾಧ್ಯತೆಯಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯವು ವಿವಾಹ ವಿಚ್ಛೇದನ ಮಂಜೂರಾತಿಯನ್ನು ಕಾಯಂಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ಆದೇಶಿಸಿದೆ.