ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ. ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದ್ದು, ಇದಾದ ಬಳಿಕ ಗಂಭೀರ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಭಾರತ ತಂಡದ ಪ್ರಸ್ತುತ ತರಬೇತುದಾರ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಜೂನ್ನಲ್ಲಿ ಕೊನೆಗೊಳ್ಳಲಿದ್ದು, ಹೀಗಾಗಿ ಕಳೆದ ತಿಂಗಳು ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಇದೀಗ ಗೌತಮ್ ಗಂಭೀರ್ ಅವರ ಹೆಸರು ಫೈನಲ್ ಆಗಿದ್ದು, ಶೀಘ್ರದಲ್ಲೇ ಅವರು ಕೋಚ್ ಆಗಿ ನೇಮಕಗೊಳ್ಳಲಿದ್ದಾರೆಂದು ಬಲ್ಲಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆ ವರದಿಯಲ್ಲಿ ಹೇಳಲಾಗಿದೆ.
ಈ ಬಾರಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗುತ್ತಿದೆ ಎಂದು ಐಪಿಎಲ್ ಫ್ರಾಂಚೈಸಿ ಮಾಲೀಕರೊಬ್ಬರು ಬಹಿರಂಗಪಡಿಸಿದ್ದರು. ಇದರೊಂದಿಗೆ ಟೀಮ್ ಇಂಡಿಯಾ ಪರ ಗೌತಿ ಹೊಸ ಇನಿಂಗ್ಸ್ ಆರಂಭಿಸುವುದು ಖಚಿತವಾಗಿತ್ತು.
ಇದೀಗ ಗೌತಮ್ ಗಂಭೀರ್ ಹೆಡ್ ಕೋಚ್ ಆಗಿ ನೇಮಕಗೊಳ್ಳುವುದು ಬಹುತೇಕ ಖಚಿತ ಎಂದು ಇಂಡಿಯಾ ಟುಡೆ ಕೂಡ ವರದಿ ಮಾಡಿದೆ. ಹೀಗಾಗಿ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾದ ಜವಾಬ್ದಾರಿಯುತ ಹುದ್ದೆಯಲ್ಲಿ ಗಂಭೀರ್ ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
ಅಂದಹಾಗೆ ಗೌತಮ್ ಗಂಭೀರ್ ಇದುವರೆಗೆ ಯಾವುದೇ ತಂಡಕ್ಕೆ ಕೋಚಿಂಗ್ ನೀಡಿ ಅನುಭವ ಹೊಂದಿಲ್ಲ. ಇದಾಗ್ಯೂ ಐಪಿಎಲ್ನಲ್ಲಿ ಮೂರು ಸೀಸನ್ಗಳಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. 2022 ಮತ್ತು 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದ ಗೌತಮ್ ಗಂಭೀರ್ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಗಂಭೀರ್ ಅವರ ಮಾರ್ಗದರ್ಶನದಲ್ಲೇ ಕೆಕೆಆರ್ ತಂಡ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದು ವಿಶೇಷ.
ಈ ಅಮೋಘ ಗೆಲುವಿನ ಬಳಿಕ ಕೆಕೆಆರ್ ತಂಡದ ಮೆಂಟರ್ ಅನ್ನೇ ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ನೇಮಿಸಲು ಬಿಸಿಸಿಐ ಕೂಡ ಆಸಕ್ತಿವಹಿಸಿದೆ. ಅದರಂತೆ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಮೂಲಕ ಮುಖ್ಯ ಕೋಚ್ ಪಾತ್ರಕ್ಕಾಗಿ ಗಂಭೀರ್ ಅವರ ಸಂದರ್ಶನ ನಡೆಸಲಿದೆಯಾ ಅಥವಾ ನೇರವಾಗಿ ಆಯ್ಕೆ ಮಾಡಲಿದೆಯಾ ಕಾದು ನೋಡಬೇಕಿದೆ.