ದೇಶಾದ್ಯಂತ ತನ್ನ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಖಡಕ್ ಆದೇಶವೊಂದನ್ನು ನೀಡಿದೆ.
ಕಚೇರಿಗೆ ತಡವಾಗಿ ಬರುವ ಸಿಬ್ಬಂದಿಗಳಿಗೆ ಕೇಂದ್ರ ಚಾಟಿ ಬೀಸಿದೆ. ಇನ್ನು ಮುಂದೆ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಬೆಳಗ್ಗೆ 9:15 ರೊಳಗೆ ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇದರಲ್ಲಿ 15 ನಿಮಿಷಗಳ ಗ್ರೇಸ್ ಅವಧಿಯೂ ಸೇರಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಸುತ್ತೋಲೆ ಹೊರಡಿಸಿದೆ.
ನೌಕರರು ತಮ್ಮ ಕಚೇರಿಗಳಿಗೆ ಬೆಳಗ್ಗೆ 9:15 ಕ್ಕೆ ತಲುಪಬೇಕು ಹಾಗೂ ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ಹಾಜರಾತಿಯನ್ನು ಹಾಕಬೇಕು ಎಂದು ಸೂಚಿಸಿದೆ.
ಸಿಬ್ಬಂದಿಗಳು ಒಂದು ವೇಳೆ ಬೆಳಗ್ಗೆ 9.15 ರೊಳಗೆ ಬಾರದಿದ್ದಲ್ಲಿ ಅರ್ಧ ದಿನದ ಕ್ಯಾಶುಯಲ್ ರಜೆಯನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ. ಕೇಂದ್ರ ಸರ್ಕಾರಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5.30 ರವರೆಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಗಳು ಕಚೇರಿಗೆ ತಡವಾಗಿ ಬರುವುದು ಮತ್ತು ಕಚೇರಿಯಿಂದ ಬೇಗನೆ ಹೊರಡುವವರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಇದನ್ನು ತಡೆಯಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿಡ್-19ನಿಂದ ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಬಳಕೆಯನ್ನು ಅಮಾನತುಗೊಳಿಸಲಾಗಿತ್ತು. ಆದರೆ ಇದೀಗ ಆ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಹಾಕಲೇಬೇಕು ಎಂದು ಹೇಳಲಾಗಿದೆ.
ಸಿಬ್ಬಂದಿ ರಜೆ ಬಗ್ಗೆ ಮುಂಚಿತವಾಗಿ ತಿಳಿಸಬೇಕು
ವರದಿಯ ಪ್ರಕಾರ, ಸಿಬ್ಬಂದಿಗಳಿಗೆ ಒಂದು ದಿನ ಕಚೇರಿಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮುಂಚಿತವಾಗಿ ತಿಳಿಸಲು ನೌಕರರಿಗೆ ಸುತ್ತೋಲೆ ಹೇಳಲಾಗಿದೆ. ಇದಕ್ಕಾಗಿ ಕ್ಯಾಶುಯಲ್ ರಜೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದೆ.
ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಿಬ್ಬಂದಿಗಳು ಸಂಜೆ 7 ರ ನಂತರ ಹೊರಡುವುದರಿಂದ ಅವರಿಗೆ ನಿಗದಿತ ಕೆಲಸದ ಸಮಯವಿಲ್ಲ. ಹೆಚ್ಚಿದ ಡಿಜಿಟಲೀಕರಣವು ಅನೇಕ ಫೈಲ್ಗಳನ್ನು ವಿದ್ಯುನ್ಮಾನವಾಗಿ ಅವರಿಗೆ ಲಭ್ಯವಾಗುವಂತೆ ಮಾಡಿದೆ. ಇದು ಮನೆಯಿಂದಲೂ ಕೆಲಸ ಮಾಡುವ ಅವಕಾಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಕೋವಿಡ್ -19 ತುಂಬಾ ಬದಲಾವಣೆಯನ್ನು ತಂದಿದೆ. ಲಾಕ್ಡೌನ್ ಸಮಯದಲ್ಲಿ ಮಾಡಿದ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ, ಈಗಲೂ ರೂಢಿಯಲ್ಲಿದೆ. ಇದು ವಾಸ್ತವವಾಗಿ ತಮ್ಮ ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ಉದ್ಯೋಗಿಗಳು ವಾದಿಸುತ್ತಾರೆ.