ಯಾವುದೇ ಅಹಿತಕರ ಘಟನೆಗಳು ನಡೆದಾಗ ಒಂದಷ್ಟು ಮಂದಿಯ ಮೇಲೆ ಎಫ್. ಐ. ಆರ್. (FIR) ದಾಖಲಾದ ಬಗ್ಗೆ ವರದಿಯಾಗುತ್ತದೆ. ಕೆಲವೊಮ್ಮೆ ಇನ್ನೂ ಎಫ್. ಐ. ಆರ್. ದಾಖಲಾಗಿಲ್ಲ ಎಂಬುವುದೇ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ. ಅಷ್ಟಕ್ಕೂ ಎಫ್. ಐ. ಆರ್ ಅಂದರೆ ಏನು? ಯಾಕೆ? ಯಾವಾಗ ಎಫ್. ಐ. ಆರ್. ದಾಖಲಾಗುತ್ತದೆ? ದಾಖಲಾದರೆ ಮುಂದೇನಾಗುತ್ತದೆ? ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
ಎಫ್. ಐ. ಆರ್. ಎಂದರೇನು?
First Information Report ಅಥವಾ ಪ್ರಥಮ ವರ್ತಮಾನ ವರದಿ ಎನ್ನುವುದೇ ಎಫ್. ಐ. ಆರ್. ಇದರ ಪೂರ್ಣರೂಪ. ಯಾವುದೇ ಒಂದು ಪ್ರಕರಣ ಘಟಿಸಿದಾಗ ಅದರ ಒಂದು ಚಿತ್ರಣವನ್ನು ನೀಡುವ ಕೆಲಸವನ್ನು ಎಫ್. ಐ. ಆರ್. ಮಾಡುತ್ತದೆ.
ಯಾವುದೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದ ತಕ್ಷಣ ಮೊದಲಿಗೆ ಎಫ್. ಐ. ಆರ್. ದಾಖಲಿಸಲಾಗುತ್ತದೆ. ಬಳಿಕವಷ್ಟೇ ನಂತರದ ಕಾನೂನು ಪ್ರಕ್ರಿಯೆ. ಸಾಮಾನ್ಯವಾಗಿ, ಪೊಲೀಸ್ ಠಾಣಾ ಮೆಟ್ಟಿಲೇರಿದ ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥ ಪಡಿಸುವುದನ್ನು ನೀವು ಕೇಳಿರುತ್ತೀರಿ. ಅಂದರೆ ಇದು ಎಫ್. ಐ. ಆರ್. ದಾಖಲಾಗುವುದಕ್ಕೆ ಮೊದಲಾಯಿತಷ್ಟೇ. ಒಮ್ಮೆ ಎಫ್. ಐ. ಆರ್. ಆಯಿತು ಎಂದರೆ ಪ್ರಕರಣ ದಾಖಲಾಯಿತು ಎಂದರ್ಥ.
ಎಲ್ಲ ಪ್ರಕರಣಗಳಿಗೆ ಎಫ್. ಐ. ಆರ್. ಆಗುತ್ತಾ?
ಖಂಡಿತಾ ಇಲ್ಲ. ಒಂದಷ್ಟು ಪ್ರಕರಣಗಳಿಗೆ ಎಫ್. ಐ. ಆರ್. ದಾಖಲಿಸಲು ಆಗುವುದಿಲ್ಲ. ನಮ್ಮ ದೇಶದಲ್ಲಿ ಅಪರಾಧಗಳನ್ನು ಎರಡು ವಿಧವಾಗಿ ವಿಂಗಡಿಸಿದ್ದಾರೆ.
- Cognizable Offence (ಗುರುತಿಸಬಹುದಾದ ಅಪರಾಧಗಳು)
- Non Cognizable Offence (ಮೇಲ್ನೋಟಕ್ಕೆ ಗುರುತಿಸಲಾಗದ ಅಪರಾಧಗಳು)
ಗುರುತಿಸಬಹುದಾದ ಅಪರಾಧಗಳು ಉದಾ: ಕೊಲೆ, ಮಾನಭಂಗ, ದರೋಡೆ ಇತ್ಯಾದಿ. ಈ ಅಪರಾಧಗಳು ನಡೆದಾಗ ಪೊಲೀಸರು ನೇರವಾಗಿ ಎಫ್. ಐ. ಆರ್. ದಾಖಲಿಸಿ ಆರೋಪಿಯನ್ನು ವಾರಂಟ್ ಇಲ್ಲದೇ ಬಂಧಿಸಬಹುದು. ಇಲ್ಲಿ ತನಿಖೆ ನಡೆಸಲು ನ್ಯಾಯಾಲಯದಿಂದ ಯಾವುದೇ ಆದೇಶವನ್ನು ಪಡೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಮೇಲ್ನೋಟಕ್ಕೆ ಗುರುತಿಸಲಾಗದ ಅಪರಾಧಗಳು ಅಂದರೆ ಅನೈತಿಕ ಸಂಬಂಧ, ಮೋಸ, ವಂಚನೆ, ಆಹಾರ ಪದಾರ್ಥಗಳ ಕಲಬೆರಕೆ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ಮೊದಲಾಗಿ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಎಲ್ಲ ಪ್ರಕರಣಗಳಲ್ಲಿ ಎಫ್. ಐ. ಆರ್. ದಾಖಲಾಗುವುದಿಲ್ಲ.
ಎಲ್ಲಿ ಎಫ್. ಐ. ಆರ್. ದಾಖಲಿಸಬೇಕು?
ಕೇವಲ ಪೊಲೀಸ್ ಠಾಣೆಯಲ್ಲಿ ಮಾತ್ರ ಎಫ್. ಐ. ಆರ್. ದಾಖಲಿಸಲು ಅವಕಾಶವಿದೆ. ಅಪರಾಧ ನಡೆದ ಪೊಲೀಸ್ ವ್ಯಾಪ್ತಿಯ ಠಾಣೆಯಲ್ಲೇ ಎಫ್. ಐ. ಆರ್. ದಾಖಲಿಸಿದರೆ ಹಲವು ಪ್ರಯೋಜನಗಳಿವೆ. ಎಫ್. ಐ. ಆರ್. ಯಾವ ಪೊಲೀಸ್ ಠಾಣೆಯಲ್ಲಿ ಬೇಕಾದರೂ ದಾಖಲಿಸಬಹುದು. ಆದರೆ ಇತರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೆ ಅವರು ಎಫ್. ಐ. ಆರ್. ಅನ್ನು ಮತ್ತೆ ಪ್ರಕರಣಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸುತ್ತಾರೆ. ಇದರಿಂದಾಗಿ ಸಮಯ ವ್ಯರ್ಥವಾಗುತ್ತದೆ.
ಎಫ್. ಐ. ಆರ್.ನ ಒಂದು ಝೆರಾಕ್ಸ್ ಪ್ರತಿಯನ್ನು ದೂರುದಾರರಿಗೆ ನೀಡಬೇಕೆಂಬ ನಿಯಮವಿದೆ. ಎಫ್. ಐ. ಆರ್. ಅನ್ನು ಪುಸ್ತಕದಲ್ಲಿ ನಮೂದಿಸಿ ಅದರ ಪ್ರತಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಕಳುಹಿಸುತ್ತಾರೆ. ಪೊಲೀಸ್ ಠಾಣೆಗಳಲ್ಲಿ ಎಫ್. ಐ. ಆರ್. ದಾಖಲಿಸಲು ನಿರಾಕರಿಸಿದ್ದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್, ಸರ್ಕಲ್ ಇನ್ಸ್ ಪೆಕ್ಟರ್, ಡಿವೈಎಸ್ಪಿ, ಎಎಸ್ಪಿ ಅಥವಾ ಎಸ್ಪಿಗೂ ದೂರು ನೀಡಬಹುದಾಗಿದೆ.
ಯಾರು ಎಫ್. ಐ. ಆರ್. ದಾಖಲಿಸಬಹುದು?
CRPC Section 154, ಎಫ್. ಐ. ಆರ್. ಬಗ್ಗೆ ಸಾಕಷ್ಟು ನಿರ್ದೇಶಗಳನ್ನು ನೀಡುತ್ತದೆ. ಅಪರಾಧಕ್ಕೆ ಒಳಗಾದವರು, ಅಪರಾಧ ನಡೆಸುತ್ತಿರುವುದನ್ನು ಕಂಡವರು ಅಥವಾ ಅಪರಾಧದ ಬಗ್ಗೆ ಮಾಹಿತಿ ಇರುವ ಯಾವುದೇ ವ್ಯಕ್ತಿ ಎಫ್. ಐ. ಆರ್. ಅನ್ನು ಪೊಲೀಸರಿಗೆ ದೂರು ನೀಡುವ ಮೂಲಕ ದಾಖಲಿಸಬಹುದು.
ನೀವು ಲಿಖಿತ ರೂಪದಲ್ಲಿ ದೂರನ್ನು ಸಿದ್ಧಪಡಿಸಿದ್ದಲ್ಲಿ ಅದರ ಎರಡು ಪ್ರತಿಗಳನ್ನು ಪೊಲೀಸ್ ಠಾಣೆಗೆ ತೆಗೆದು ಕೊಂಡು ಹೋಗಿ ಮತ್ತು ಕರ್ತವ್ಯದ ಮೇಲಿರುವ ಅಧಿಕಾರಿಗೆ ನೀಡಿ. ಎರಡು ಪ್ರತಿಗಳಿಗೂ ಸೀಲ್ ಹಾಕುತ್ತಾರೆ. ಮಾತ್ರವಲ್ಲ ಒಂದು ಪ್ರತಿಯನ್ನು ನಿಮಗೆ ಹಿಂದಿರುಗಿಸುತ್ತಾರೆ. ಆ ಸೀಲಿನಲ್ಲಿ ಡೈಲಿ ಡೈರಿ ನಂಬರ್ ಅಥವಾ ಡಿಸಿ ನಂಬರ್ ಅನ್ನು ಉಲ್ಲೇಖ ಮಾಡಲಾಗಿರುತ್ತದೆ. ನಿಮ್ಮ ದೂರನ್ನು ಪೊಲೀಸರು ಸ್ವೀಕರಿಸಿರುವುದಕ್ಕೆ ಈ ನಂಬರ್ ಒಂದು ದಾಖಲೆ ಎಂದು ಪರಿಗಣಿಸಲಾಗುತ್ತದೆ.
ಒಮ್ಮೆ ನೀವು ಎಫ್. ಐ. ಆರ್. ದಾಖಲು ಮಾಡಿದ ನಂತರ ಅದರಲ್ಲಿರುವ ಮಾಹಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ನೀವು ಪೊಲೀಸರಿಗೆ ಹೆಚ್ಚಿನ ಮಾಹಿತಿ ನೀಡಬಹುದು.
ಎಫ್. ಐ. ಆರ್.ನಲ್ಲಿ ಏನಿರುತ್ತದೆ?
ಅಪರಾಧ ನಡೆದಿರುವುದನ್ನು ಕಣ್ಣಾರೆ ಕಂಡಿದ್ದಾರೆ ಮಾತ್ರ ದೂರು ನೀಡಬೇಕೆಂಬ ನಿಯಮವಿಲ್ಲ. ಆದರೆ ಅಪರಾಧದ ಬಗ್ಗೆ ನಿಖರ ಮಾಹಿತಿ ಮತ್ತು ಸತ್ಯ ಸಂಗತಿಗಳನ್ನು ತಿಳಿದು ಎಫ್. ಐ. ಆರ್. ದಾಖಲಿಸಬೇಕಾಗುತ್ತದೆ. ಎಫ್. ಐ. ಆರ್. ದಾಖಲಿಸುವಾಗ ಅಪರಾಧ ನಡೆದ ದಿನಾಂಕ, ಸ್ಥಳ, ಸಮಯದ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳ ಪಾತ್ರಗಳ ಬಗ್ಗೆ ಅಂದರೆ ಅವರು ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಂಬ ಬಗ್ಗೆ ವಿವರಣೆ ನೀಡಬೇಕು. ಆಸ್ತಿ – ಪಾಸ್ತಿಗಳಿಗೆ ಹಾನಿ ಆಗಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ. ಅಪರಾಧ ನಡೆಸಲು ಉಪಯೋಗಿಸಿದ ಆಯುಧಗಳ ಬಗ್ಗೆಯೂ ಮಾಹಿತಿ ನೀಡಬೇಕು. ಪೊಲೀಸ್ ಅಧಿಕಾರಿ ನೀವು ಹೇಳಿದ್ದನ್ನು ಬರೆದುಕೊಂಡು ಅದನ್ನು ಓದಿ ನಿಮಗೆ ಹೇಳಬೇಕು. ಅದರಲ್ಲಿ ಬರೆದಿಡುವುದು ಸರಿಯೆಂದು ದೂರುದಾರರು ಖಾತ್ರಿಪಡಿಸಿದ ನಂತರ ದೂರುದಾರರು ಸಹಿ ಮಾಡಬೇಕು.
ಎಫ್. ಐ. ಆರ್. ದಾಖಲಾದ ನಂತರ
ತನಿಖೆಯ ಆರಂಭಕ್ಕೆ ಎಫ್. ಐ. ಆರ್. ಪ್ರಮುಖ ಪಾತ್ರ ವಹಿಸುತ್ತದೆ. ಎಫ್. ಐ. ಆರ್. ನಲ್ಲಿರುವ ಮಾಹಿತಿಯ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸುತ್ತಾರೆ. ತಕ್ಷಣ ಎಫ್. ಐ. ಆರ್. ದಾಖಲು ಮಾಡುವುದರಿಂದ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಜೊತೆಗೆ ಪೊಲೀಸರು ಬೇಗ ತನಿಖೆ ಆರಂಭಿಸಲು ಸಾಧ್ಯವಾಗುತ್ತದೆ. ಎಫ್. ಐ. ಆರ್. ದಾಖಲಾದ ನಂತರವಷ್ಟೇ ಪೊಲೀಸರು ಅಧಿಕೃತ ತನಿಖೆ ನಡೆಸಲು ಮುಂದಾಗುತ್ತಾರೆ. ಎಫ್. ಐ. ಆರ್. ನಲ್ಲಿ ಉಲ್ಲೇಖಿಸಿದವರನ್ನು ತನಿಖೆ ನಡೆಸುತ್ತಾರೆ. ವಿಚಾರಣೆ ನಡೆಸುತ್ತಾರೆ. ಅವರಿಂದ ಹೇಳಿಕೆಗಳನ್ನು ಪಡೆದುಕೊಂಡು ಅಪರಾಧ ನಡೆದ ಸ್ಥಳ ಪರಿಶೀಲನೆ ನಡೆಸುತ್ತಾರೆ. ಶವ ಮರಣೋತ್ತರ ಪರೀಕ್ಷೆಗೆ ಕಳುಹಿಸುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಸಂಪೂರ್ಣ ತನಿಖೆ ಮುಗಿದ ನಂತರ ತನಿಖಾಧಿಕಾರಿ ಆರೋಪ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಇದನ್ನು ಚಾರ್ಜ್ ಶೀಟ್ ಎನ್ನುತ್ತಾರೆ. ಎಫ್. ಐ. ಆರ್. ಅನ್ನು ದಾಖಲಿಸಿ 24 ಗಂಟೆಯೊಳಗೆ ಯಾರನ್ನಾದರೂ ಬಂಧಿಸಿದರೆ ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆಗ ಅವನು ಅಪರಾಧಿ ಆಗಿರುವುದಿಲ್ಲ. ಕೇವಲ ಆರೋಪಿ ಮಾತ್ರ ಆಗಿರುತ್ತಾನೆ. ಒಬ್ಬನನ್ನು ನ್ಯಾಯಾಲಯ ತೀರ್ಪಿನಲ್ಲಿ ಅಪರಾಧಿ ಎಂದು ಘೋಷಿಸುವವರೆಗೂ ಅವನು ಆರೋಪಿ ಮಾತ್ರ ಆಗಿರುತ್ತಾನೆ.
ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ, ಬಳಿಕ ಅಪರಾಧ ಸಾಬೀತು ಪಡಿಸುತ್ತದೆ. ಆಮೇಲಿನಿಂದ ಆರೋಪಿ ಅಪರಾಧಿ ಆಗುತ್ತಾನೆ. ಇಲ್ಲದೇ ಇದ್ದರೆ ನ್ಯಾಯಾಲಯ, ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಆರೋಪಿ ಹಾಗೂ ಅಪರಾಧಿಗೆ ವ್ಯತ್ಯಾಸ ಇರುತ್ತದೆ. ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ, ಆತನನ್ನು ಅಥವಾ ಆಕೆಯನ್ನು ಅಪರಾಧಿ ಎಂದು ಘೋಷಿಸಿದ ಬಳಿಕವಷ್ಟೇ ಅಪರಾಧಿ ಎಂದು ಕರೆಯಬಹುದು. ಅಲ್ಲಿವರೆಗೂ ಆತ ಅಥವಾ ಆಕೆ ಆರೋಪಿ ಮಾತ್ರ. ಅಂದರೆ ನೀವು ಹೊರಿಸಿದ ಆರೋಪ ಮಾತ್ರ ಆತನ ಅಥವಾ ಆಕೆಯ ಮೇಲಿರುತ್ತದೆ.
ಎಫ್. ಐ. ಆರ್. ದಾಖಲಿಸಿದರೆ ಜಾಮೀನು ಸಿಗುತ್ತಾ?
ಎಫ್. ಐ. ಆರ್. ಎನ್ನುವುದು ತನಿಖೆಯ ಆರಂಭಕ್ಕೆ ಇರುವ ಒಂದು ಕಾನೂನು ಪ್ರಕ್ರಿಯೆಯಷ್ಟೇ. ಅಪರಾಧ ಸಂಬಂಧಿಸಿದ ಕೃತ್ಯಕ್ಕೆ ಜಾಮೀನು ನೀಡುವುದು ಅಥವಾ ನೀಡದಿರುವುದು ನ್ಯಾಯಾಲಯದ ವಿವೇಚನೆಗೆ ಒಳಪಟ್ಟಿರುತ್ತದೆ.
ಕೆಲ ಸಂದರ್ಭಗಳಲ್ಲಿ ಆರೋಪಿಯನ್ನು ನೇರ ನ್ಯಾಯಾಧೀಶರ ಮನೆಗೆ ಹಾಜರು ಪಡಿಸುವ ಘಟನೆಗಳು ಇವೆ. ಅವು ಅಷ್ಟು ತೀವ್ರತರವಾದ ಪ್ರಕರಣವಾಗಿದ್ದಾಗ ಮಾತ್ರ ಪೊಲೀಸರು ಈ ಕ್ರಮ ಅನುಸರಿಸುತ್ತಾರೆ. ಅಲ್ಲಿ ವಿಚಾರಣೆ ನಡೆಸುವ ನ್ಯಾಯಾಧೀಶರು, ಜಾಮೀನು ನೀಡುವುದೋ ಅಥವಾ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದೋ ಎನ್ನುವುದನ್ನು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ, ತೀವ್ರತರ ಪ್ರಕರಣವೇ ಆಗಿರುವುದರಿಂದ ಪೊಲೀಸ್ ಕಸ್ಟಡಿಗೆ ಒಪ್ಪಿಸುವುದೇ ಹೆಚ್ಚು.
ಸುಳ್ಳು ಎಫ್. ಐ. ಆರ್. ದಾಖಲಾದಾಗ
ಸುಳ್ಳು ಎಫ್. ಐ. ಆರ್. ದಾಖಲಿಸುವುದು ಕಾನೂನು ಪ್ರಕಾರ ಮತ್ತು ಎಫ್. ಐ. ಆರ್. ಸೆಕ್ಷನ್ 182ರ ಪ್ರಕಾರ ಸ್ಪಷ್ಟ ಕಾನೂನು ಉಲ್ಲಂಘನೆ ಆಗುತ್ತದೆ. ಸುಳ್ಳು ಎಫ್. ಐ. ಆರ್. ದಾಖಲಿಸಿದರೆ, ಕಾನೂನು ಪ್ರಕಾರ ಶಿಕ್ಷೆ ಆಗುವಂತಹ ಪ್ರಸಂಗವೂ ಇದೆ. ಹಾಗಾಗಿ ನ್ಯಾಯಾಲಯದ ಘನತೆಗೆ, ಕಾನೂನಿನ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕಾದುದು ಪ್ರತಿಯೋರ್ವ ನಾಗರೀಕರ ಕರ್ತವ್ಯ ಎನ್ನುವುದನ್ನು ಮರೆಯಬಾರದು.
ಎಫ್. ಐ. ಆರ್. ದಾಖಲಿಸಲು ಪೊಲೀಸರು ಹಿಂದೇಟು ಹಾಕಿದರೆ?
ಹೀಗೊಂದು ಪ್ರಶ್ನೆ ಪ್ರತಿಯೊಬ್ಬರಲ್ಲೂ ಬರುತ್ತದೆ. ಪೊಲೀಸ್ ಠಾಣೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸ್ ಠಾಣೆ ಅಥವಾ ಯಾರಿಗೇ ಆಗಲಿ ಭಯ ಪಡುವ ಅವಶ್ಯಕತೆಯೇ ಇಲ್ಲ. ಅಪರಾಧದ ಬಗ್ಗೆ ನಿಮಗೆ ಮಾಹಿತಿ ಇದ್ದರೆ ನೀವು ನೋಡಿರುವ ಘಟನೆಯ ಬಗ್ಗೆಯೂ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಎಫ್. ಐ. ಆರ್. ದಾಖಲಿಸಬಹುದು. ಒಂದು ವೇಳೆ ಪೊಲೀಸರು ಎಫ್. ಐ. ಆರ್. ದಾಖಲಿಸಲು ಹಿಂದೇಟು ಹಾಕಿದರೆ ಏನು ಮಾಡುವುದು? ಇದಕ್ಕೂ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಜಿಲ್ಲಾ ಕೇಂದ್ರವಾಗಿದ್ದರೆ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಎಸ್.ಪಿ. ಅವರನ್ನು ಕಮೀಷನರೇಟ್ ವ್ಯಾಪ್ತಿ ಆಗಿದ್ದರೆ ನೇರವಾಗಿ ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಅಥವಾ ಕಚೇರಿಯಲ್ಲಿ ದೂರು ನೀಡಬಹುದು. ಮುಂದಿನ ವಿಚಾರಣೆಯನ್ನು ನೇರವಾಗಿ ಎಸ್.ಪಿ. (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ) ಅಥವಾ ಕಮೀಷನರ್ ಅವರೇ ನಡೆಸುತ್ತಾರೆ. ಹಾಗಾಗಿ ಎಫ್. ಐ. ಆರ್. ದಾಖಲು ಮಾಡುವುದಿಲ್ಲ ಎಂದು ಹೇಳುವಂತಿಲ್ಲ.
ಆನ್ ಲೈನ್ ಮೂಲಕವೂ ಎಫ್. ಐ. ಆರ್. ದಾಖಲು
ಕೆಲವು ರಾಜ್ಯ ಮತ್ತು ನಗರಗಳಲ್ಲಿ ನಿರ್ದಿಷ್ಟ ವರ್ಗದ ಎಫ್. ಐ. ಆರ್. ಮತ್ತು ದೂರುಗಳನ್ನು ಆನ್ ಲೈನ್ ಮೂಲಕವು ದಾಖಲು ಮಾಡಬಹುದು. ಉದಾಹರಣೆಗೆ, ಕಾಣೆಯಾದ ವ್ಯಕ್ತಿ ಅಥವಾ ಮಕ್ಕಳ ಕುರಿತ ದೂರು, ಯಾವುದೇ ಗುರುತು ಹಿಡಯಲಾಗದ ವ್ಯಕ್ತಿ ಅಥವಾ ಮಕ್ಕಳು ಅಥವಾ ಮೃತದೇಹ, ಹಿರಿಯ ನಾಗರಿಕರ ನೋಂದಣಿ, ಕಳುವಾದ ಅಥವಾ ಯಾರೂ ಕ್ಲೈಮ್ ಮಾಡದ ವಾಹನಗಳು ಮತ್ತು ಮೊಬೈಲ್ ಕಳವಿಗೆ ಸಂಬಂಧಿಸಿದ ದೂರುಗಳನ್ನು ಆನ್ ಲೈನ್ ಮೂಲಕವೂ ಸಲ್ಲಿಸಬಹುದಾಗಿದೆ.
ಆನ್ ಲೈನ್ ಮೂಲಕ ಎಫ್. ಐ. ಆರ್. ದಾಖಲಿಸುವಂತಹ ಸುಲಭ ಪ್ರಕ್ರಿಯೆಯನ್ನು ರಾಜ್ಯ ಗೃಹ ಇಲಾಖೆ ಜಾರಿಗೆ ತಂದಿರುವುದು ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ನೀವು ಆನ್ ಲೈನ್ ಮೂಲಕ ಎಫ್. ಐ. ಆರ್. ದಾಖಲಿಸಿದ ಬಳಿಕ ಯಾವ ಪ್ರಕ್ರಿಯೆ ನಡೆಯುತ್ತಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಲು ಸಾಧ್ಯ.
ಇಂದು ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಬದಲಾಗುತ್ತಿದೆ. ಬ್ರಿಟಿಷ್ ಕಾಲದ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಪೊಲೀಸ್ ಎಂದರೆ ಭಯ ಪಡುವ ವಾತಾವರಣ ಬಿಟ್ಟು, ಆರಕ್ಷಕ ಎನ್ನುವ ಪದಕ್ಕೆ ತಾತ್ಪರ್ಯವಾಗಿ ಕೆಲಸ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಎಫ್. ಐ. ಆರ್. ದಾಖಲೀಕರಣಕ್ಕೆ ಡಿಜಿಟಲ್ ವೇದಿಕೆ ರೂಪಿಸಿದಂತೆ ಇಂದು ಬೇರೆ ಬೇರೆ ವಿಷಯಗಳಿಗೆ ಡಿಜಿಟಲ್ ತಂತ್ರಾಂಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಿರುವುದನ್ನು ನಾವು ಕಾಣಬಹುದು.