ಬೆಡ್ ಶೀಟ್ ಮತ್ತು ಲುಂಗಿಯ ನೆರವಿನಿಂದ 20 ಅಡಿಯ ಜೈಲು ಗೋಡೆಯನ್ನು ಏರಿ ಐದು ಮಂದಿ ಪೋಕ್ಸೋ ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಶುಕ್ರವಾರ ನಸುಕಿನ 1 ಗಂಟೆಯಿಂದ 2 ಗಂಟೆಯ ಅವಧಿಯಲ್ಲಿ ಈ ಕೈದಿಗಳು ಮೊರಿಗಾಂವ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದು, ಈ ಘಟನೆ ಬಗ್ಗೆ ಮೆಜಿಸ್ಟ್ರಿಯಲ್ ತನೀಖೆಗೆ ಜಿಲ್ಲಾಡಳಿತ ಆದೇಶಿಸಿದೆ. ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿ ಪ್ರಕಾಶ್ ಸೈಕಿಯಾ ಅವರನ್ನು ಅಮಾನತು ಮಾಡಲಾಗಿದೆ. ಗುವಾಹತಿಯಲ್ಲಿ ಸಹಾಯಕ ಜೈಲರ್ಗಳಾಗಿದ್ದ ಇಬ್ಬರನ್ನು ತಾತ್ಕಾಲಿಕವಾಗಿ ಜೈಲು ನಿರ್ವಹಣೆಗೆ ನಿಯೋಜಿಸಲಾಗಿದೆ.
ಘಟನೆ ಬಗ್ಗೆ ಪ್ರತ್ಯೇಕ ಇಲಾಖಾ ತನಿಖೆ ನಡೆಸಲಾಗುವುದು ಎಂದು ಕಾರಾಗೃಹ ವಿಭಾಗದ ಐಜಿ ಪುಬಲಿ ಗೋಹಿಯಾನ್ ಸ್ಪಷ್ಟಪಡಿಸಿದ್ದಾರೆ. ಇವರು 20 ಅಡಿ ಎತ್ತರದ ಆವರಣ ಗೋಡೆಯನ್ನು ಏರಲು ಬೆಡ್ ಶೀಟ್ ಹಾಗೂ ಲುಂಗಿಗಳನ್ನು ಬಳಸಿದ್ದರು ಎಂದು ಹೇಳಲಾಗಿದೆ.
ಇವರ ಪತ್ತೆಗೆ ಜಾಲ ರೂಪಿಸಲಾಗಿದೆ ಎಂದು ಮೋರಿಗಾಂವ್ ಎಸ್ಪಿ ಹೇಮಂತ ಕುಮಾರ್ ದಾಸ್ ಸ್ಪಷ್ಟಪಡಿಸಿದ್ದಾರೆ. ಕೆಲ ಮಂದಿ ಕೈದಿಗಳನ್ನು ಈ ಸಂಬಂಧ ವಿಚಾರಣೆ ನಡೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.